ಮೈಸೂರು: ಈ ಬಾರಿಯ ಚುನಾವಣೆಯಲ್ಲಿ ನಾನು 2 ಕ್ಷೇತ್ರಗಳಲ್ಲಿ ಸ್ಪರ್ಧಿಸಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಂಡ್ಯ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸುತ್ತೇನೆ. ನಾನು ನಿಲ್ಲುತ್ತೇನೆ ಅನ್ನೋದು ಸುಮ್ಮನೆ ಊಹಾಪೋಹ ಎಂದು ಸ್ಪಷ್ಟಪಡಿಸಿದರು. ಕೇವಲ ಚನ್ನಪಟ್ಟಣ ಕ್ಷೇತ್ರದಿಂದ ಮಾತ್ರ ಸ್ಪರ್ಧೆ ಮಾಡ್ತೇನೆ , ಸಂಸದೆ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಿದರೂ ನಾನು ಮಂಡ್ಯದಲ್ಲಿ ಸ್ಪರ್ಧಿಸಲ್ಲ, ಕಾಂಗ್ರೆಸ್ ಬಿಜೆಪಿ ಬಗ್ಗೆ ಮಾತನಾಡಿ, ಟೈಂ ವ್ಯರ್ಥ ಮಾಡಲ್ಲ, ಟೀಕೆಯಿಂದ ಜನರಿಗೆ ಯಾವುದೇ ಪ್ರಯೋಜನ ಇಲ್ಲ, ಕೇವಲ 37 ಶಾಸಕರನ್ನು ಇಟ್ಕೊಂಡೇ ಕೆಲಸ ಮಾಡಿದ್ದೇನೆ ಎಂದರು.
ಬಿಜೆಪಿ ನಾಯಕರು ಸಮಾವೇಶಕ್ಕೆ ಜನ ಕರೆತರಲು ಡಿಸಿ, ಅಧಿಕಾರಿಗಳಿಗೆ ಜವಾಬ್ದಾರಿ ಕೊಡುತ್ತಾರೆ. ನಾವು ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಮನವಿ ಮಾಡುತ್ತಿದ್ದೇವೆ. ಇದು ಜೆಡಿಎಸ್ ಪಕ್ಷದ ಮನವಿಯಾಗಿದೆ. ಈ ಬಾರಿ ಪಾರದರ್ಶಕ ಚುನಾವಣೆ ಅನುಮಾನ. ಕೇವಲ ಕೆಲವು ಪಕ್ಷಕ್ಕೆ ಮಾತ್ರ ಪಾರದರ್ಶಕತೆ ಮಾಡುತ್ತಾರೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನಿರುದ್ಯೋಗಿ ಭತ್ಯೆ ಗೃಹಿಣಿಯರಿಗೆ ಹಣ, ಅದು ಗ್ಯಾರಂಟಿ ಕಾರ್ಡ್ ಅಲ್ಲ ಡೂಪ್ಲಿಕೇಟ್ ಕಾರ್ಡ್ ಎಂದರು.
ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಯೋಜನೆ ಸಾಧ್ಯವಿಲ್ಲ. ಅವರು ಅಧಿಕಾರಕ್ಕೆ ಬರುವುದಿಲ್ಲ ಅಂತಾ ಗೊತ್ತಿದೆ. ಅವರ ನಿರ್ಧಾರಗಳೇ ಅವರನ್ನು ರಾಜಕೀಯದಿಂದ ನಿವೃತ್ತಿ ಮಾಡುತ್ತವೆ. ಅವರಿಗೆ ಗೊತ್ತು ಅವರಿಗೆ ಅಧಿಕಾರಕ್ಕೆ ಬರುವುದಿಲ್ಲ ಅಂತ, ಅದೇ ಕಾರಣಕ್ಕೆ ಅವರು ರಾಜಕೀಯ ನಿವೃತ್ತಿಯ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.