ಬಳ್ಳಾರಿ: ಹಾಸನ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಹೆಚ್‌ಡಿ ದೇವೇಗೌಡರ ಬಳಿ ಮಾತನಾಡಲು ಸಹೋದರ ಹೆಚ್‌ಡಿ ರೇವಣ್ಣ ಹೆದರುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷ ಒಂದೂವರೆ ವರ್ಷಗಳ ಹಿಂದೆಯೇ ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕೆ ಇಳಿಸಬೇಕು ಎಂಬ ನಿರ್ಧಾರ ತೆಗೆದುಕೊಂಡಿದ್ದು, ಅದರ ಪರವಾಗಿ ನಿಲ್ಲುತ್ತೇವೆ ಎಂದು ತಿಳಿಸಿದರು.
ಕೆಲವರ ಪ್ರಭಾವಕ್ಕೆ ಒಳಗಾಗಿ ರೇವಣ್ಣ ಹಾಸನ ಕ್ಷೇತ್ರದ ಟಿಕೆಟ್ ಗೆ ಒತ್ತಾಯಿಸುತ್ತಿದ್ದಾರೆ. ರೇವಣ್ಣ ವಾದ ನನಗೆ ಮತ್ತು ದೇವೇಗೌಡರಿಗೆ ತೃಪ್ತಿ ತಂದಿಲ್ಲ, ಟಿಕೆಟ್ ಬಗ್ಗೆ ರೇವಣ್ಣ ಈವರೆಗೂ ನನ್ನ ಬಳಿ ಚರ್ಚೆಗೆ ಬಂದಿಲ್ಲ. ನಮ್ಮ ಪಕ್ಷ ಹೊರತು ಪಡಿಸಿ, ಹಾಸನದಲ್ಲಿ ಕೆಲವು ಮನೆ ಹಾಳು ಮಾಡುವ ಶಕುನಿಗಳಿದ್ದಾರೆ. ಅವರು ಬೆಳಗ್ಗೆಯಿಂದ ಸಂಜೆಯವರೆಗೂ ರೇವಣ್ಣನವರ ಬ್ರೈನ್ ವಾಶ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರತಿಯೊಬ್ಬರಿಗೂ ಅಭ್ಯರ್ಥಿಯಾಗಬೇಕೆಂಬ ಆಸೆಯಿರುತ್ತದೆ. ರೇವಣ್ಣ ಹಾಗೂ ಭವಾನಿ ಅವರಿಗೂ ಅಂತಹ ಆಸೆಯಿದೆ. ಆದ್ರೆ ಸಾಮಾನ್ಯ ಕಾರ್ಯಕರ್ತನನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಬೇಕೆಂದು ಈ ಬಾರಿ ನಿರ್ಧರಿಸಲಾಗಿದೆ ಎಂದರು.