ಬೆಂಗಳೂರು: ಬಿಜೆಪಿಗರಿಗೆ ಈ ಬಾರಿ ಗೆಲುವು ಕಷ್ಟ ಅಂತಾ ಗೊತ್ತಾಗಿದೆ, ಅದಕ್ಕೆ ಪಿಕ್ಚರ್‌ನವರನ್ನು ಕರೆಸ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ನಟರ ಮುಖ ತೋರಿಸಿ ಮತ ಪಡೆಯಲು ಬಿಜೆಪಿ ಹೊರಟಿದೆ ಎಂದು ಅಭಿಪ್ರಾಯಪಟ್ಟರು. ನಟ ಸುದೀಪ್ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಹರಿದಾಡುತ್ತಿತ್ತು. ಸದ್ಯ ಈಗ ಕಿಚ್ಚ ಸುದೀಪ್ ತಾವು ಯಾವ ಪಕ್ಷವನ್ನೂ ಸೇರುತ್ತಿಲ್ಲ. ಬದಲಿಗೆ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುತ್ತೇನೆ. ಬಿಜೆಪಿಯ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನಮಗೆ ನಮ್ಮ ಕಾರ್ಯಕರ್ತರು, ನನ್ನ ಜನರೇ ಸ್ಟಾರ್ ಪ್ರಚಾರಕರು. ಸಿನಿಮಾ ನಟರ ಬಗ್ಗೆ ನಾನು ಲಘುವಾಗಿ ಮಾತನಾಡಲು ಹೋಗಲ್ಲ. ಆದರೆ ಅವರೊಂದು ಪಕ್ಷದ ಪರವಾಗಿ ಪ್ರಚಾರ ಮಾಡಿ ಆ ಮೇಲೆ ಸುಮ್ಮನಾಗುತ್ತಾರೆ. ಎಂದು ಅಭಿಪ್ರಾಯಪಟ್ಟರು.
ಬೊಮ್ಮಾಯಿ ಮೇಲಿನ ವಿಶ್ವಾಸದಿಂದ ಅವರ ಪರ ಪ್ರಚಾರ ಮಾಡುತ್ತೇನೆ ಎಂದು ಸುದೀಪ್ ಹೇಳಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ. ಬಿಜೆಪಿಯವರು ಅಭಿವೃದ್ಧಿ ವಿಚಾರದಲ್ಲಿ ವೈಫಲ್ಯ ಕಂಡಿದ್ದು, ಇಂಥ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಇದರಿಂದ ಪ್ರಯೋಜನವಾಗದು ಎಂದು ಹೇಳಿದ್ದಾರೆ.