ಬೆಂಗಳೂರು: ಶಾಸಕರ ಪುತ್ರರತ್ನ ಇರಿಸಿದ್ದ ನೋಟಿನ ಕಂತೆಗಳು ಯಾರ ಹುಂಡಿಗೆ? ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಮನೆಯಲ್ಲಿ 7.62 ಕೋಟಿ ರೂ. ನಗದು ಪತ್ತೆಯಾದ ವಿಚಾರಕ್ಕೆ ಸಿಡಿಮಿಡಿಗೊಂಡ ಹೆಚ್‌ಡಿಕೆ ಸರಣಿ ಟ್ವೀಟ್ ಮೂಲಕ ಟೀಕಿಸಿದ್ದಾರೆ. ಶಾಸಕರ ಮನೆಯಲ್ಲೇ 6 ಕೋಟಿ ಸಿಕ್ಕರೆ, ಇನ್ನು 40 ಪರ್ಸೆಂಟ್ ಚರಂಡಿಯಲ್ಲಿ ತೆವಳುತ್ತಿರುವ ಸಚಿವರ ಮನೆಗಳಲ್ಲಿ ಇನ್ನೆಷ್ಟು ಸಿಗಬಹುದು? ರಾಮರಾಜ್ಯ ಮಾಡುತ್ತೇವೆಂದು ಹೇಳಿ ಕರ್ನಾಟಕವನ್ನು `ಕಮಿಷನ್ ರಾಜ್ಯ’ ಮಾಡಿದ್ದೀರಿ. ಹೌದಲ್ಲವೇ ಅಮಿತ್ ಶಾ ಅವರೇ? ಎಂದು ಕೇಳಿದ್ದಾರೆ.
ರಾಜ್ಯಕ್ಕೆ ಮತ್ತೆ ಹಾರಿ ಬಂದ ಅಮಿತ್ ಶಾ ಅವರಿಗೆ ಹಾರ್ದಿಕ ಸ್ವಾಗತ.. ಸುಸ್ವಾಗತ. ನಿಮ್ಮ ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಭರ್ತಿ 40 ಪರ್ಸೆಂಟ್ ಕಮಿಷನ್ ಉಡಾಯಿಸುತ್ತಿದೆ ಎನ್ನುವುದಕ್ಕೆ ನಿಮ್ಮ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನ ಕಂತೆ ಕಂತೆಗಳ ಪುರಾಣವೇ ದೊಡ್ಡ ಪುರಾವೆ. ಡಬಲ್ ಎಂಜಿನ್ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕೊಚ್ಚೆಯಲ್ಲಿ ಉರುಳಾಡುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ತಾಜಾ ಉದಾಹರಣೆ ಬೇಕಾ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಮಿತ್ ಶಾರಿಗೆ ಕುಟುಕಿದ್ದಾರೆ.
ಅಮಿತ್ ಶಾ ಅವರೇ ಈಗ ಹೇಳಿ.. ಕರ್ನಾಟಕ ಯಾರ ಎಟಿಎಂ? ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ ಎಂದು ನೀವು ಹೇಳಿದ್ದು ಈ ಅರ್ಥದಲ್ಲಿಯಾ? ಸಾಬೂನು ಕಾರ್ಖಾನೆಯನ್ನು ಸಖತ್ತಾಗಿ ಸಾರಿಸಿ ಗುಂಡಾಂತರ ಮಾಡುವುದಾ? ಎಂದು ಟ್ವೀಟ್ ಮಾಡಿದ್ದಾರೆ.