ಮುದ್ದೇಬಿಹಾಳ: ಸಿದ್ದರಾಮಯ್ಯ ಜೆಡಿಎಸ್ ಪಕ್ಷದ ಬಗ್ಗೆ ನಾಲಿಗೆ ಹರಿಬಿಡುತ್ತಿದ್ದಾರೆ. ಸುಮ್ಮನಿರದಿದ್ದರೇ ನನ್ನ ನೇತೃತ್ವದ ಮೈತ್ರಿ ಸರ್ಕಾರ ಕೆಡವಲು ಧರ್ಮಸ್ಥಳದ ಸಿದ್ಧವನದಲ್ಲಿ ನಡೆಸಿದ ಷಡ್ಯಂತ್ರ ಬಿಚ್ಚಿಡಬೇಕಾಗುತ್ತದೆ ಎಂದು ಹೆಚ್.ಡಿ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿ,ನನ್ನ ನೇತೃತ್ವದ ಮೈತ್ರಿ ಸರ್ಕಾರ ಕೆಡವಲು ನೀವ್ ಏನು ಮಾಡಿದಿರಿ? ಯಾರ ಜೊತೆ ಕೂಡಿ ಕುತಂತ್ರ ಮಾಡಿದಿರಿ ಅನ್ನೋದು ತಿಳಿದಿದೆ. ಬಿಜೆಪಿಗೆ ಅಧಿಕಾರ ಹೋಗಬಾರದು ಅಂತಾ ನಿಮ್ಮ ಪಕ್ಷದ ವರಿಷ್ಠರು ನಮ್ಮ ಬಾಗಿಲಿಗೆ ಬಂದಿದ್ದರು.
ಖರ್ಗೆ, ಪರಮೇಶ್ವರ್, ಡಿ.ಕೆ ಶಿವಕುಮಾರ್ ಇದ್ದಾರೆ. ಅವರಿಗೆ ಇದೆಲ್ಲಾ ಗೊತ್ತಿಲ್ಲವೆ? ಆಗ ನೀವು ಎಲ್ಲಿದ್ದೀರಿ ಎಂದು ಪ್ರಶ್ನಿಸಿ ಕಿಡಿ ಕಾರಿದ್ದಾರೆ. ಬಿಜೆಪಿ ಪಕ್ಷದವರಿಗಿಂತ ಭ್ರಷ್ಟಾಚಾರದಲ್ಲಿ ನೀವೇನೂ ಕಮ್ಮಿ ಇಲ್ಲ. ನೀವು ಬೇಕಾದಷ್ಟು ಅಕ್ರಮ ನಡೆಸಿದ್ದೀರಿ. ನಾನು ಎತ್ತಿದ ಪ್ರಶ್ನೆಗಳಿಗೆ ಈವರೆಗೆ ಉತ್ತರ ಕೊಡಲು ನಿಮ್ಮಿಂದ ಆಗಿಲ್ಲ.
ಮತ್ತೆ ನಮ್ಮ ಪಕ್ಷದ ಬಗ್ಗೆ ನಾಲಿಗೆ ಹರಿಯಬಿಡುತ್ತೀರಾ? ನಾಚಿಕೆ ಇಲ್ಲವೇ? ನನ್ನ ಸರ್ಕಾರ ಹೇಗೆ ಹೋಯಿತು? ಅದನ್ನು ತೆಗೆಯಲು ನಿಮ್ಮ ಕಾಣಿಕೆ ಏನು? ಬಿಜೆಪಿಯವರ ಜತೆ ಹೇಗೆಲ್ಲಾ ಕುಮ್ಮಕ್ಕು ಕೊಟ್ಟಿದ್ದೀರಿ? ಯಾರನ್ನೆಲ್ಲ ಎಲ್ಲೆಲ್ಲಿಗೆ ಕಳಿಸಿದಿರಿ ಎಂಬ ಮಾಹಿತಿ ನನಗಿದೆ ಎಂದು ಗುಡುಗಿದ್ದಾರೆ.