ಶಿವಮೊಗ್ಗ: ಕಾಂಗ್ರೆಸ್ ನವರಿಗೆ ಮೋದಿ ಮುಖ ಬಿಟ್ಟರೆ ಮತ್ತೇನು ಕಾಣಲು ಸಾಧ್ಯ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್ ಮುಖವಾಡ ಕಳಚಿದರೆ ಮೋದಿ ಮುಖ ಕಾಣುತ್ತದೆ ಎಂಬ ಸುರ್ಜೆವಾಲ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಜೆಡಿಎಸ್ ಮುಖವಾಡ ಕಳಚಿದರೆ ಮೋದಿ ಮುಖ ಕಾಣುತ್ತದೆ ಎಂದು ಹೇಳಿದ ಸುರ್ಜೆವಾಲಗೆ ನಾಚಿಕೆ ಆಗಬೇಕು. ಜೆಡಿಎಸ್ ಅವಹೇಳನ ಮಾಡಿದಷ್ಟು ಕಾಂಗ್ರೆಸ್ ನೆಲಕ್ಕಚ್ಚುತ್ತದೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತರು ಬಲಿಷ್ಠವಾಗಿದ್ದಾರೆ. ಜೆಡಿಎಸ್ ರೈತ ಪರ ಪಕ್ಷ, ಬಡವರ ಪರ ಪಕ್ಷ. ಹೀಗಾಗಿ ಮಂಡ್ಯದಲ್ಲಿ ಯಾವ ಸೀಮೆ ನಾಯಕ ಬಂದರೂ ಜೆಡಿಎಸ್ ಪಕ್ಷವನ್ನೂ ಏನೂ ಮಾಡಲೂ ಆಗುವುದಿಲ್ಲ ಎಂದು ಹೇಳಿದರು.
ಆಪರೇಷನ್ ಕಮಲದ ನಂತರದ ಮೊದಲ ಚುನಾವಣೆಯಲ್ಲಿ ನಿಮ್ಮ ಪ್ರತಿಪಕ್ಷ ನಾಯಕ ಎಷ್ಟಕ್ಕೆ ಸುಪಾರಿ ಪಡೆದಿದ್ದರು ಎಂಬ ಬಗ್ಗೆ ಸುರ್ಜೆವಾಲ ಬಹಿರಂಗ ಚರ್ಚೆಗೆ ಬರಲಿ. ಕಾಂಗ್ರೆಸ್ ಬಿಜೆಪಿಯ ಬಿ ಟೀಮೋ ಜೆಡಿಎಸ್ ಬಿ ಟೀಮೋ ಎಂಬ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.