ಬೀದರ್: ‘ಉಚಿತ ಶಿಕ್ಷಣ, ಗ್ರಾಮ ಪಂಚಾಯತಿಗೊಂದು ಆಸ್ಪತ್ರೆ ಸೇರಿದಂತೆ ಪಂಚ ಯೋಜನೆ ರೂಪಿಸಲಾಗಿದೆ. ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಈ ಯೋಜನೆಗಳ ಜಾರಿಗೆ ಅನುಕೂಲವಾಗಲಿದೆ ಎಂದು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಂಚರತ್ನ ರಥಯಾತ್ರೆ ನಿಮಿತ್ತ ಇಲ್ಲಿನ ಗಣೇಶ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ರಾಜ್ಯದೆಲ್ಲೆಡೆ ಜೆಡಿಎಸ್ ಪರ ಅಲೆ ಇದೆ. ಈ ಬಾರಿ ಸ್ವತಂತ್ರ್ಯವಾಗಿ ಆಡಳಿತ ನಡೆಸಲು ಅವಕಾಶ ಕಲ್ಪಿಸಬೇಕು. ಈ ಐದು ವರ್ಷದ ಆಡಳಿತದಲ್ಲಿ ಬಡವರು ಮತ್ತು ರೈತರ ಜೀವನ ಅಭಿವೃದ್ಧಿಗೇ ನನ್ನ ಮೊದಲ ಆದ್ಯತೆ’ ಎಂದರು.
ಆರೋಗ್ಯ ಕ್ಷೇತ್ರದ ಅನುಕೂಲಕ್ಕಾಗಿ ಗ್ರಾ.ಪಂಗೆ ಒಂದು 30 ಹಾಸಿಗೆಯ ಆಸ್ಪತ್ರೆ, ರೈತರಿಗಾಗಿ ನೀರಾವರಿ ಯೋಜನೆ, ನಿರುದ್ಯೋಗಿ ಮತ್ತು ಮಹಿಳೆಯರಿಗಾಗಿ ಸ್ವಯಂ ಉದ್ಯೋಗಕ್ಕೆ ನೆರವು ನೀಡಲಾಗುವುದು’ ಎಂದು ಮನವಿ ಮಾಡಿದರು.ಒಂದರಿಂದ 12ನೇ ತರಗತಿವರೆಗೆ ಆಂಗ್ಲ ಮತ್ತು ಕನ್ನಡ ಮಾಧ್ಯಮದಲ್ಲಿ ಉಚಿತ ಶಿಕ್ಷಣ ನೀಡುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ರಾಜ್ಯದ ಪ್ರತಿ ಗ್ರಾ.ಪಂಗೆ ಒಂದು ಶಾಲೆ ಆರಂಭಿಸಲಾಗುವುದು ಎಂದು ತಿಳಿಸಿದರು.