ದಾವಣಗೆರೆ: ಬಜೆಟ್ ಘೋಷಣೆ ಕೇವಲ ಕಾಗದ ಪತ್ರದಲ್ಲಿ ಇರುತ್ತವಷ್ಟೇ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಘೋಷಣೆಗಳು ಕೇವಲ ಕಾಗದ ಪತ್ರವಾಗಿದ್ದು, ಚುನಾವಣೆ ಪ್ರಚಾರಕ್ಕೆ ಬಿಜೆಪಿ ಅದನ್ನು ಬಳಸಿಕೊಳ್ಳಲಿದೆ. ಬಿಜೆಪಿಯನ್ನೇ ಜನ ತಿರಸ್ಕರಿಸಿದರೆ ಯಾವ ರೀತಿ ಯೋಜನೆಗಳು ಜಾರಿಗೊಳ್ಳುತ್ತವೆ ಎಂದು ಪ್ರಶ್ನಿಸಿದರು.
ರಾಜ್ಯದ ರೈಲ್ವೇ ಯೋಜನೆಗಳು ಇಂದಿಗೂ ಹಾಗೇ ಉಳಿದಿವೆ. ಘೋಷಣೆಯಾದ ಯೋಜನೆಗಳು ನಾಳೆಗೆ ಜಾರಿಯೂ ಆಗುವುದಿಲ್ಲ ಮಹದಾಯಿ, ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಹಣ ಘೋಷಣೆ ಮಾಡಿದ್ದು, ಆ ಹಣ ಬರುವುದೂ ಏಪ್ರಿಲ್ ತಿಂಗಳ ನಂತರವೇ ಎಂದು ಅಭಿಪ್ರಾಯಪಟ್ಟರು.
ಯಾವುದೇ ಅಭಿವೃದ್ಧಿ ಘೋಷಣೆ ಮಾಡಿದರೂ ಅವು ಜಾರಿಗೊಳ್ಳುವುದು ಚುನಾವಣೆ ನಂತರವಷ್ಟೆ. ಕಳೆದ 8 ವರ್ಷಗಳಲ್ಲಿ ಘೋಷಣೆಯಾಗದ ಕಾರ್ಯಕ್ರಮಗಳನ್ನು ಇಂದು ಘೋಷಣೆ ಮಾಡುತ್ತಾರೆ. ಜನರನ್ನು ತಾತ್ಕಾಲಿಕವಾಗಿ ಮರುಳು ಮಾಡಲು ಘೋಷಣೆ ಮಾಡಲಾಗಿದೆಯಷ್ಟೇ ಎಂದರು.
ಏನೇ ಘೋಷಣೆ ಮಾಡಿದರೂ ಮುಂದೆ ಬರುವ ಸರ್ಕಾರದ ಮೇಲೆ ಅದು ನಿರ್ಧಾರವಾಗುತ್ತದೆ. ಮನವಿ ಕೊಟ್ಟಿರುವ ಈ ರೈತರ ಸಾಲ ಮನ್ನಾ ಆಗಿದೆ. ಆದರೆ, ಸಾಲದ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ. ಬಿಜೆಪಿ ಸರ್ಕಾರದಲ್ಲಿ ಸಾಲ ಮನ್ನಾ ಸೌಲಭ್ಯ ವಂಚಿತವಾದ ಕುಟುಂಬಗಳ ಸ್ಥಿತಿ ಇದು ಎಂದು ಬೇಸರ ವ್ಯಕ್ತಪಡಿಸಿದರು.