ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ 2023 ಮೂಗಿಗೆ ತುಪ್ಪ ಸವರಿದಂತಿದೆ ಎಂದು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಬಜೆಟ್ ನಲ್ಲಿ ಘೋಷಿಸುವ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳಾಗಿ ಪರಿಗಣಿಸಿ ಅವುಗಳನ್ನು ಜಾರಿಗೊಳಿಸಬೇಕೆಂದು ಬಹಳ ಹಿಂದೆಯೇ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಈಗ ಚುನಾವಣೆ ವರ್ಷದಲ್ಲಿ ಮಾಡಿರುವ ಕಾರ್ಯಕ್ರಮ ಸರ್ಕಾರ ಅನುಷ್ಠಾನಕ್ಕೆ ತರೋದು ಯಾವಾಗ ಅಂತ ಕುಮಾರಸ್ವಾಮಿ ಪ್ರಶ್ನಿಸಿದರು.
ಚುನಾವಣಾ ವರ್ಷದಲ್ಲಿ ಜನರನ್ನು ಮರಳು ಮಾಡಲು ಯೋಜನೆಗಳ ಘೋಷಣೆಯಾಗಿದೆ ಅವು ಜಾರಿಯಾಗೋದು ಕೇಂದ್ರದಲ್ಲಿ ಸರ್ಕಾರ ಬದಲಾವಣೆಯಾದ ನಂತರವೇ ಎಂದು ವ್ಯಂಗ್ಯವಾಡಿದರು. ಈಗ ಬಜೆಟ್ ಘೋಷಣೆ ಆದ್ರೂ ಹಣಕಾಸು ಬಿಡುಗಡೆ ಏಪ್ರಿಲ್ ಮೇಲೆ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ.
ಇದೊಂದು ಕರ್ನಾಟಕ ಕೇಂದ್ರಿತ ಚುನಾವಣಾ ಬಜೆಟ್. ರಾಜ್ಯದಲ್ಲಿ ಚುನಾವಣೆ ಕೆಲವೇ ತಿಂಗಳು ಇದೆ. ಬಜೆಟ್ ನಲ್ಲಿ ಘೋಷಣೆ ಮಾಡಿದ ಎಲ್ಲ ಯೋಜನೆಗಳು ಜಾರಿ ಆಗಬೇಕಲ್ಲ ಎಂದು ವ್ಯಂಗ್ಯವಾಡಿದರು. ಮನೆ ಬಿದ್ದಾಗ 5 ಲಕ್ಷ, ಕೋವಿಡ್ ನಲ್ಲಿ ಸಾವನ್ನಪ್ಪಿದಾಗ 1 ಲಕ್ಷ, ಕೋವಿಡ್ ವಾರಿಯರ್ಸ್ ಗೆ 30 ಲಕ್ಷ ಕೊಡ್ತಿವಿ ಅಂದಿದ್ರು, ಎಲ್ಲಿ ಕೊಟ್ಟರು.
ಕೇಂದ್ರ ಘೋಷಣೆ ಮಾಡಿದ ಎಲ್ಲ ಯೋಜನೆಗಳು ಕೇವಲ ಕಾಗದದಲ್ಲಿ ಮಾತ್ರ ಇರತ್ತೆ. ರೈಲ್ವೆ ಯೋಜನೆ 20-30 ವರ್ಷಗಳ ಹಿಂದೆ ಘೋಷಣೆ ಆಗಿರುವುದು ಇನ್ನೂ ಆಮೆ ಗತಿಯಲ್ಲಿ ನಡೆಯುತ್ತಿದೆ. ಕೇಂದ್ರ ಕಾರ್ಯಕ್ರಮ ಘೋಷಣೆ ಆಗಿದೆ ಉಳಿದಿದೆ. ತಕ್ಷಣ ಬೆಳಗ್ಗೆ ಜನರಿಗೆ ಅನುಕೂಲ ಆಗಲ್ಲ ಎಂದು ಹೇಳಿದರು.