ಹೊಳೆನರಸೀಪುರ: ಯಾರು ಏನೇ ಹೇಳಬಹುದು. ಆದರೆ ಟಿಕೆಟ್ ಕೊಡೋದು ಕುಮಾರಸ್ವಾಮಿ ನೇತೃತ್ವದಲ್ಲಿಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ ಕುಮಾರಸ್ವಾಮಿ ಹಾಗೂ ಪಕ್ಷದ ಅಧ್ಯಕ್ಷರು ಮತ್ತು ಪ್ರಮುಖರ ಅಭಿಪ್ರಾಯ ತೆಗೆದುಕೊಂಡು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಟಿಕೆಟ್ ಕೊಡುವ ವಿಚಾರದಲ್ಲಿ ಜಿಲ್ಲೆಯಲ್ಲಿ ನಾನೇ ಅಂತಿಮ ಅಲ್ಲ. ಎಲ್ಲರೂ ಕುಳಿತು ಚರ್ಚೆ ಮಾಡಿ ನಂತರ ಟಿಕೆಟ್ ಕೊಡುತ್ತೇವೆ. ಅದನ್ನು ಬಿಟ್ಟು ಕುಮಾರಸ್ವಾಮಿ ಅವರನ್ನ ಹೊರತುಪಡಿಸಿ ಟಿಕೆಟ್ ಕೊಡುವ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ಪುತ್ರ ಸೂರಜ್ ರೇವಣ್ಣಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಕೆಲವು ಕಾರ್ಯಕರ್ತರು ಭವಾನಿ ರೇವಣ್ಣಗೆ ಕೊಡಬೇಕು ಅಂತಾ ಕೇಳುತ್ತಾರೆ. ಇನ್ನೂ ಕೆಲವರು ಸ್ಥಳೀಯರಿಗೆ ಕೊಡಬೇಕು ಅಂತಾರೆ. ಅದು ತಪ್ಪು ಅಂತ ನಾನು ಹೇಳುವುದಿಲ್ಲ. ಆದರೆ ಟಿಕೆಟ್ ಕೊಡೋದು ಕುಮಾರಸ್ವಾಮಿ ಮತ್ತು ದೇವೇಗೌಡರು. ಅವರನ್ನು ಬಿಟ್ಟು ಪಕ್ಷದಲ್ಲಿ ಏನು ನಡೆಯುವುದಿಲ್ಲ ಎಂದು ತಮ್ಮನ ಪರ ಬ್ಯಾಟ್ ಬೀಸಿದರು.
ಕುಮಾರಸ್ವಾಮಿ ಮತ್ತು ರೇವಣ್ಣ ಅವರನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಅದೇನಾದರೂ ಅವರು ಪ್ರಯತ್ನ ಪಡುತ್ತಿದ್ದರೆ ಅದು ಭ್ರಮನಿರಸನ ಅಷ್ಟೇ. ಇದನ್ನ ಕ್ಲಿಯರ್ ಕಟ್ಟಾಗಿ ನಾನು ಹೇಳುತ್ತಿದ್ದೇನೆ. ಆದರೆ ನಾನು ನನ್ನ ಜಿಲ್ಲೆ ಅಭಿವೃದ್ದಿಗೋಸ್ಕರ ಶ್ರಮಿಸುತ್ತಿದ್ದೇನೆ. ಯಾರಿಗೆ ಟಿಕೆಟ್ ಕೊಡಬೇಕು ಎಂಬುದು ವರಿಷ್ಠರ ನಿರ್ಧಾರ. ನಾನೊಬ್ಬನೇ ಇಲ್ಲಿ ನಿರ್ಧರಿಸುವುದಿಲ್ಲ ಎಂದು ಹೇಳಿದರು.