ಕಲಬುರಗಿ: ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಹರಕೆಯ ಕುರಿಯಾಗುವುದರಲ್ಲಿ ಅನುಮಾನವೇ ಇಲ್ಲ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರದಲ್ಲಿ ಸಿದ್ದರಾಮಯ್ಯ ಅವರಿಗೆ ನಿಲ್ಲುವಂತೆ ಯಾರು ಒತ್ತಡ ಹಾಕಿದ್ದಾರೆ ಎಂಬುದು ನನಗೆ ಗೊತ್ತಿಲ್ಲ.
ಕೋಲಾರದಲ್ಲಿ ನಿಲ್ಲಿಸುವ ಮೂಲಕ ಅವರ ಪಕ್ಷದವರೇ ಅವರನ್ನು ಹರಕೆಯ ಕುರಿ ಮಾಡಲು ಹೊರಟಿದ್ದಾರೆ ಎಂದರು. ನಾನು ಸ್ವತಃ ಕೋಲಾರದಲ್ಲಿ ಸುತ್ತಾಡಿ, ಅಲ್ಲಿಯ ಜನರ ಭಾವನೆ ಅರಿತುಕೊಂಡಿದ್ದೇನೆ. ಕೋಲಾರದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಲಿ ಅಥವಾ ನಾಯಕರಿಗಾಗಲಿ ಮತ ಪಡೆಯುವ ಶಕ್ತಿ ಇಲ್ಲ. ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ನಿಲ್ಲಿಸಲು ಹೊರಟಿದ್ದಾರೆ ಎಂದರು.
ರಾಜ್ಯಕ್ಕೆ ನರೇಂದ್ರ ಮೋದಿ ಬಂದಿರುವುದಕ್ಕೆ ಕಾಂಗ್ರೆಸ್, ಜೆಡಿಎಸ್‍ಗೆ ಭಯ ಶುರುವಾಗಿದೆ ಎಂಬ ಸಿಪಿ ಯೋಗೇಶ್ವರ್ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ನರೇಂದ್ರ ಮೋದಿ ಬಂದರೆ ನಮಗ್ಯಾವ ಭಯವೂ ಇಲ್ಲ. ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರ ಆಗಲಿ ಯಾವ ಯೋಜನೆಗಳನ್ನು ಜನರಿಗೆ ಕೊಟ್ಟಿದ್ದೀರಾ ಎಂಬುದರ ಬಗ್ಗೆ ನಿಮಗೆ ಭಯವಾಗಬೇಕು ಎಂದರು.