ಬೆಂಗಳೂರು: ಸನಾತನ ಧರ್ಮವನ್ನು ಸೊಳ್ಳೆ, ಡೆಂಘೀ ಹಾಗೂ ಕೊರೊನಾಕ್ಕೆ ಹೋಲಿಸಿದ್ದ ತಮಿಳುನಾಡು ಸಚಿವ ಉದಯ್ ನಿಧಿ ಸ್ಟಾಲಿನ್ ಹೇಳಿಕೆ ವಿಚಾರವಾಗಿ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಅಸ್ಪೃಶ್ಯತೆ ವಿರುದ್ಧ ಹೋರಾಡಿದವರೆಲ್ಲಾ ಸನಾತನ ಧರ್ಮದ ವಿರೋಧಿಗಳೆ, ಜಾತಿ ವ್ಯವಸ್ಥೆ ಸನಾತನ ಧರ್ಮದಿಂದ ಬಂದಿದ್ದು ಅಂತಾರೆ, ಅವರವರ ಅಭಿಪ್ರಾಯಗಳಿಗೆ ನಾವು ಗೌರವ ಕೊಡಬೇಕು’ ಎಂದು ಹೇಳಿದರು.
ಈ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, ‘ಹಿಂದೂ ಧರ್ಮದಲ್ಲಿ ಬೇಕಾದಷ್ಟು ವಿಚಾರಗಳಿವೆ. ಬ್ರಹ್ಮ ಧರ್ಮ ಇದೆ, ಆರ್ಯ ಸಮಾಜ ಇದೆ, ಲಿಂಗಾಯತ ಧರ್ಮ ಇದೆ. ಎಲ್ಲರ ಅಭಿಪ್ರಾಯ ಸ್ವೀಕಾರ ಮಾಡಿಕೊಂಡು ಮುಂದೆ ಹೋಗಬೇಕು. ಅದು ಬಿಟ್ಟು ಭಾವನೆಗಳಿಗೆ ಗೌರವ ಕೊಡದೆ ಮನಸ್ಸು ಹೊಡೆಯುವ ಕೆಲಸ ಮಾಡಬಾರದು’ ಎಂದರು.
ಇದನ್ನೂ ಓದಿ; ಹೇಳಿಕೆಗೆ ಬದ್ದ, ಎಫ್ಐಆರ್ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ : ಪ್ರಿಯಾಂಕ್ ಖರ್ಗೆ
ನಾನು ಸನಾತನ ಧರ್ಮಕ್ಕೆ ಹುಟ್ಟಿದವನಲ್ಲ ಎಂಬ ಪ್ರಕಾಶ್ ರೈ ಹೇಳಿಕೆ ಬಗ್ಗೆ ಮಾತನಾಡಿ, ‘ಅದು ಪ್ರಕಾಶ್ ರೈ ಅವರ ವೈಯಕ್ತಿಕ ಅಭಿಪ್ರಾಯ; ಗಾಂಧೀಜಿಯನ್ನ ಗೌರವಿಸುವವರು ಇದ್ದಾರೆ, ಗಾಂಧಿಯನ್ನ ಕೊಂದ ನಾಥೂರಾಮ್ ಗೋಡ್ಸೆ ಪರ ಇರುವವರೂ ಇದ್ದಾರೆ. ಸನಾತನ ಧರ್ಮದಿಂದ ಜಾತಿ ಬಂತು ಎಂದು ಹೇಳ್ತಾರೆ. ಅದು ಅವ್ರ ಅಭಿಪ್ರಾಯ, ಇನ್ನೊಬ್ಬರದ್ದು ವಿರುದ್ಧದ ಅಭಿಪ್ರಾಯ ಇರಬಹುದು’ ಎಂದರು.
‘ಪರಮೇಶ್ವರ್ ಹೇಳಿಕೆ ಬಗ್ಗೆ ನಾನು ಚರ್ಚೆ ಮಾಡೋದಿಲ್ಲ. ಆದರೆ, ಅಭಿಪ್ರಾಯ ಮುಖ್ಯ. ಗೌರಿ ಲಂಕೇಶ್ ಕೊಲೆ ಯಾಕೆ ಮಾಡಿದ್ರು, ಎಂಎಂ ಕಲ್ಬುರ್ಗಿ ಕೊಲೆ ಯಾಕಾಯ್ತು? ಸಹನೆ ಇಲ್ಲದವರು ಸಹಿಸಿಕೊಳ್ಳಲ್ಲ. ಜನರನ್ನ ಹೊಡೆಯೋದು ಬಿಜೆಪಿಯವರ ಉದ್ದೇಶ, ಸುಳ್ಳು ಹೇಳಿ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡ್ತಿದ್ದಾರೆ’ ಎಂದು ಹೇಳಿದರು.
ಇದನ್ನೂ ಓದಿ; ಎಂಎಲ್‌ಸಿ ಪ್ರದೀಪ್ ಯಾರಿಗೆ ಬಕೆಟ್ ಹಿಡಿದಿದ್ದ; ಶೆಟ್ಟರ್ ಸಹೋದರರ ವಿರುದ್ಧ ಈಶ್ವರಪ್ಪ ವಾಗ್ದಾಳಿ
ಭಾರತ ಎಂಬ ಮರುನಾಮಕರಣ ವಿಚಾರವಾಗಿ ಪ್ರತಿಕ್ರಿಯಿಸಿ, ‘ಬಿಜೆಪಿಯವರಿಂದ ಅನಾವಶ್ಯಕ ಚರ್ಚೆಗಳು ನಡೆಯುತ್ತಿವೆ; ಭಾರತವನ್ನ ಉರ್ದುವಿನಲ್ಲಿ ಹಿಂದೂಸ್ಥಾನ ಅಂತ ಕರೆಯುತ್ತಾರೆ. ಇಂಗ್ಲಿಷ್ ನಲ್ಲಿ ಇಂಡಿಯಾ ಅನ್ನುತ್ತೇವೆ. ಹಿಂದಿಯಲ್ಲಿ ಭಾರತ್ ಎಂದು ಕತೆಯುತ್ತೇವೆ. ಆದರೂ ಬಿಜೆಪಿಯವರು ಚರ್ಚೆಗಳಲ್ಲಿ ತಲ್ಲೀನ ಆಗಿರಬೇಕು ಎಂದು ಹೀಗೆಲ್ಲಾ ಮಾಡ್ತಿದ್ದಾರೆ. ಇಂಡಿಯಾ ಒಕ್ಕೂಟ ಮಾಡಿದ್ದೇವೆ; ಇದರ ವಿರುದ್ಧ ದ್ವೇಷ ಸಾಧಿಸಲು ಹೊರಟಿದ್ದಾರೆ. ಕ್ಷುಲ್ಲಕವಾಗಿ ನಡೆದುಕೊಳ್ಳುವುದು ಸರಿಯಲ್ಲ, ದೇಶದಲ್ಲಿ ನೂರೆಂಟು ಸಮಸ್ಯೆಗಳಿವೆ, ಅನೇಕ ರಾಜ್ಯಗಳಲ್ಲಿ ಬರಗಾಲ ಇದೆ. ಬೆಲೆ ಏರಿಕೆ, ನಿರುದ್ಯೋಗವೂ ಇದೆ. ಇದು ಬೇಜವಾಬ್ದಾರಿ, ನಿರರ್ಥಕ ವಿಚಾರ’ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
‘ಭಾರತ್, ಇಂಡಿಯಾ ಎಲ್ಲ ಒಂದೇ ಎಂದು ಸಂವಿಧಾನದಲ್ಲೇ ಹೇಳಲಾಗಿದೆ. ಬಿಜೆಪಿಯವರು ಇಂಡಿಯಾ ವರ್ಸಸ್ ಭಾರತ್ ಎಂದು ಮಾಡ್ತಿದ್ದಾರೆ. ದೇಶ ವಿಭಜಿಸೋದೆ ಇವರ ಕೆಲಸವಾಗಿದೆ. ದ್ವೇಷ ಬೆಳೆಸೋದು, ಸುಳ್ಳು ಸುದ್ದಿಗಳನ್ನ ಪ್ರಚಾರ ಮಾಡೋದೇ ಇವರ ಕೆಲಸ. ಕರ್ನಾಟಕ ವಿಧಾನಸಭೆಯ ಫಲಿತಾಂಶ ನೋಡಿದ್ದಾರೆ. ದೇಶದ ವಿಪಕ್ಷಗಳೆಲ್ಲಾ ಒಂದಾಗಿ ನಿಂತರೆ ಎನ್‌ಡಿಎಗೆ ಸೋಲು ಖಚಿತ. ಮಾಧ್ಯಮ, ಇಡಿ, ಐಟಿ, ಎಲೆಕ್ಷನ್ ಕಮಿಷನ್ ಎಲ್ಲ ಬಿಜೆಪಿ ಕೈಯಲ್ಲೇ ಇದೆ. ಎಲ್ಲವೂ ಏಕಚಕ್ರಾಧಿಪತ್ಯ ಆಗಿಬಿಟ್ಟಿದೆ; ಏನು ಬೇಕಾದರೂ ಮಾಡುತ್ತೇವೆ ಎನ್ನುತ್ತಾರೆ. ಎಷ್ಟು ಹಿಂಸಾಚಾರ ನಡೆದರೂ ಪರವಾಗಿಲ್ಲ ಅಂತಾರೆ. ಮುಂದಿನ ಚುನಾವಣೆಯಲ್ಲಿ ಸೋಲಾಗುತ್ತೆ ಅಂತಾ ಭಯ ಬಂದಿದೆ. ಹಾಗಾಗಿ, ವ್ಯರ್ಥ ಚರ್ಚೆ ಮಾಡುತ್ತಿದ್ದಾರೆ’ ಎಂದು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.