ಬೆಳಗಾವಿ: ರಾಜ್ಯದಲ್ಲಿ ಚುನಾವಣೆಗೆ ಕೆಲವು ತಿಂಗಳುಗಳಷ್ಟೇ ಬಾಕಿ ಇದೆ. ಆದಾಗ್ಯೂ ರಾಜ್ಯ ರಾಜಕಾರಣದಲ್ಲಿ ಸಂಪುಟ ವಿಸ್ತರಣೆ ಸರ್ಕಸ್ ಶುರುವಾಗಿದೆ. ಕೆಲವು ಸಚಿವಾಕಾಂಕ್ಷಿಗಳ ಒತ್ತಡದ ಹಿನ್ನೆಲೆ ಸಿಎಂ ಬೊಮ್ಮಾಯಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೋಮವಾರ (ನಿನ್ನೆ) ರಾತ್ರಿ ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಸುಮಾರು ಎರಡೂವರೆ ಗಂಟೆಗಳ ಚರ್ಚೆಯಲ್ಲಿ ಸಚಿವ ಸಂಪುಟ ವಿಸ್ತರಣೆಯ ತುರ್ತು ಅಗತ್ಯದ ಬಗ್ಗೆ ಸಿಎಂ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಂಪುಟದ ಪ್ರಾಂತ್ಯವಾರು ಮತ್ತು ಜಾತಿವಾರು ಸಚಿವರ ಮಾಹಿತಿ ಪಡೆದ ಹೈಕಮಾಂಡ್, ವಿಸ್ತರಣೆ ಬಗ್ಗೆ ಮುಂದೆ ತಿಳಿಸುತ್ತೇವೆ ಎಂದಿದ್ದಾರೆ.
ಈ ಬೆನ್ನಲ್ಲೇ ಇಂದು ಬೆಳಗ್ಗೆ ಈಶ್ವರಪ್ಪ ಅವರಿಗೆ ಸಿಎಂ ಬೊಮ್ಮಾಯಿ ದೂರವಾಣಿ ಕರೆ ಮಾಡಿ ಸಂಪುಟ ಸೇರ್ಪಡೆಗೆ ಹೈಕಮಾಂಡ್ ಒಪ್ಪಿಕೊಂಡಿದೆ ಎಂದು ಮಾಹಿತಿ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈಶ್ವರಪ್ಪ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಕಾಂಗ್ರೆಸ್ ಎಂಎಲ್‍ಸಿ ಬಿ.ಕೆ.ಹರಿಪ್ರಸಾದ್ ಲೇವಡಿ ಮಾಡಿದ್ದಾರೆ. ಎಲ್ಲಾ ತಾಲೂಕುಗಳಲ್ಲಿ ಬಿಜೆಪಿ ಕಚೇರಿ ಓಪನ್ ಮಾಡಬೇಕಿದೆ. ಹಾಗಾಗಿ ದೆಹಲಿ ನಾಯಕರಿಗೆ ಕಪ್ಪ ಕಾಣಿಕೆ ಕೊಡಲು ಸಿಎಂ ದೆಹಲಿಗೆ ಹೋಗಿ ಬಂದಿದ್ದಾರೆ ಎಂದು ಆರೋಪಿಸಿದ್ದಾರೆ.