ಬೆಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಜಯಗಳಿಸಿದ ಅಭ್ಯರ್ಥಿ ಸಿ.ಕೆ ರಾಮಮೂರ್ತಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದು, ಪ್ರತಿವಾದಿಗಳಿಗೆ ಕೋರ್ಟ್ ಸಮ್ಸನ್ ಜಾರಿಗೊಳಿಸಿದೆ.
ಜಯನಗರ ವಿಧಾನಸಭಾ ಕ್ಷೇತ್ರದಿಂದ ಸಿ.ಕೆ.ರಾಮಮೂರ್ತಿ ಆಯ್ಕೆ ಅಸಿಂಧು ಕೋರಿ ಸೌಮ್ಯ ರೆಡ್ಡಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. 827 ಮತ ಪತ್ರಗಳ ಮರುಎಣಿಕೆ ಮತ್ತು ಮತ ಎಣಿಕೆಯ ವಿಡಿಯೋ ರೆಕಾರ್ಡಿಂಗ್ ಮರು ಪರಿಶೀಲಿಸಲು ಸೌಮ್ಯರೆಡ್ಡಿ ಮನವಿ ಮಾಡಿದ್ದಾರೆ.
ಸೌಮ್ಯ ರೆಡ್ಡಿ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಸ್. ರಾಚಯ್ಯ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಶಾಸಕ ಸಿ.ಕೆ ರಾಮಮೂರ್ತಿ ಗೆ ಸಮನ್ಸ್ ನೀಡಿ ಸೆ.7ಕ್ಕೆ ವಿಚಾರಣೆ ಮುಂದೂಡಿದೆ.
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಗೆಲುವು ಕಾಣುತ್ತಿದ್ದ ಸೌಮ್ಯ ರೆಡ್ಡಿ ಈ ಬಾರಿ ಅನಿರಿಕ್ಷಿತವಾಗಿ ಸೋಲು ಅನುಭವಿಸಿದ್ದರು. ಸೌಮ್ಯ ರೆಡ್ಡಿಯವರ ಪ್ರತಿಸ್ಪರ್ಧಿ ಸಿ.ಕೆ ರಾಮಮೂರ್ತಿ 16 ಮತಗಳಿಂದ ಗೆಲುವು ದಾಖಲಿಸಿದ್ದರು. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಿದ ಸಂಭ್ರಮವಿತ್ತು, ಜಯನಗರದಲ್ಲಿ ರಾತ್ರಿಯವರೆಗೆ ಮತ ಎಣಿಕೆ ಮುಂದುವರಿದಿತ್ತು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.