ನವದೆಹಲಿ : ನವೆಂಬರ್ 12ರಂದು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆ ಕಾಂಗ್ರೆಸ್ ಇಂದು ಪ್ರಣಾಳಿಕೆ ಬಿಡುಗಡೆ ಮಾಡಿದೆ. ‘
ಪ್ರಣಾಳಿಕೆ ಬಿಡುಗಡೆ ವೇಳೆ ಮಾತನಾಡಿದ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಧನಿ ರಾಮ್ ಶಾಂಡಿಲ್, ಬಿಜೆಪಿ ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಮತ್ತು 5 ವರ್ಷಗಳ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ, ನಮ್ಮದು ಚುನಾವಣಾ ಪ್ರಣಾಳಿಕೆ ಅಲ್ಲ ಆದರೆ ಹಿಮಾಚಲ ಪ್ರದೇಶದ ಜನರ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಸಿದ್ಧಪಡಿಸಲಾದ ದಾಖಲೆಯಾಗಿದೆ ಎಂದರು.
ಹಿಮಾಚಲ, ಹಿಮಾಚಲಿಯತ್ ಔರ್ ಹಮ್ ‘ ಶೀರ್ಷಿಕೆಯಲ್ಲಿ ಪ್ರಣಾಳಿಕೆ ಬಿಡುಗಡೆಯಾಗಿದ್ದು, ಹತ್ತಾರು ಭರವಸೆಗಳನ್ನು ಕಾಂಗ್ರೆಸ್ ನೀಡಿದೆ. ವಾಗ್ದಾನದಲ್ಲಿ ಪ್ರಮುಖವಾಗಿ ಉಲ್ಲೇಖಿಸಿರುವಂತೆ, ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮೊದಲ ಸಚಿವ ಸಂಪುಟ ಸಭೆಯಲ್ಲಿ ಒಂದು ಲಕ್ಷ ಸರ್ಕಾರಿ ಉದ್ಯೋಗ ಮಂಜೂರು ಮಾಡುವ ಭರವಸೆ ನೀಡಲಾಗಿದೆ.
300 ಯೂನಿಟ್ ಉಚಿತ ವಿದ್ಯುತ್ ಮತ್ತು ಪ್ರತಿ ಮನೆಗೆ 4 ಹಸುಗಳ ಖರೀದಿಗೆ ಸಹಾಯಧನ ನೀಡುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ. ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವುದಾಗಿ, ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 10 ಕೋಟಿ ರೂ.ಗಳ ‘ಸ್ಟಾರ್ಟ್ಅಪ್ ನಿಧಿ’ ತೆರೆಯುವ, ಹೈನುಗಾರಿಕೆಯಲ್ಲಿ ತೊಡಗಿರುವವರಿಂದ ನಿತ್ಯ 10 ಲೀಟರ್ ಹಾಲನ್ನು ಖರೀದಿಸುವುದಾಗಿ ಕಾಂಗ್ರೆಸ್ ಹೇಳಿದೆ. ಸೇಬು ರೈತರಿಗಾಗಿ ಸಮಿತಿಯನ್ನು ಸ್ಥಾಪಿಸುವುದು, ಪ್ರವಾಸೋದ್ಯಮವನ್ನು ಉತ್ತೇಜಿಸಲು ಸ್ಮಾರ್ಟ್ ವಿಲೇಜ್ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದೆ.