ಬೆಂಗಳೂರು: ಗುಜರಾತ್ ಮತ್ತು ಹಿಮಾಚಲಪ್ರದೇಶದ ಫಲಿತಾಂಶ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಒಂದು ರೀತಿಯ ವಿಭಿನ್ನ ಅನುಭವ ನೀಡಿದೆ. 181 ಸ್ಥಾನಗಳಲ್ಲಿ ಬಿಜೆಪಿಯು 155 ರಲ್ಲಿ ಜಯ ಸಾಧಿಸಿದ್ದರೆ, ಕಾಂಗ್ರೆಸ್ ಕೇವಲ 17 ಸ್ಥಾನಗಳನ್ನಷ್ಟೇ ಗೆಲ್ಲಲು ಯಶಸ್ವಿಯಾಗಿದೆ. ಇನ್ನುಳಿದಂತೆ, ಆಮ್ ಆದ್ಮಿ ಪಕ್ಷ 5, ಪಕ್ಷೇತರ 3, ಸಮಾಜವಾದಿ ಪಕ್ಷದ 1 ಕ್ಷೇತ್ರಗಳಲ್ಲಿ ಗೆದ್ದಿದೆ.
ಈ ಮೂಲಕ ಆಡಳಿತಾರೂಢ ಬಿಜೆಪಿ ಅಭೂತಪೂರ್ವ ಗೆಲುವು ಕಂಡಿದ್ದರೆ, ಕಾಂಗ್ರೆಸ್ ಅಧಿಕೃತ ವಿಪಕ್ಷ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ. ಇನ್ನು ಶೇಕಡಾವಾರು ನೋಡೋದಾದ್ರೆ, ಬಿಜೆಪಿ ಶೇ.52.5 ರಷ್ಟು ಮತ ಪಡೆದಿದ್ದರೆ ಕಾಂಗ್ರೆಸ್ ಶೇ. 27.3, ಆಮ್ ಆದ್ಮಿ ಪಕ್ಷ ಶೇ.12.9 ಮತ ಗಳಿಸಿವೆ.
ಬಿಜೆಪಿಯ ಭದ್ರಕೋಟೆಯಾಗಿರುವ ಗುಜರಾತ್ ನಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸಾಧಿಸುವುದು ಕಷ್ಟ ಎನ್ನುವುದು ಮೊದಲೇ ಗೊತ್ತಿತ್ತು. ಜತೆಗೆ ಎಎಪಿ ಒಂದಷ್ಟು ಮತಗಳನ್ನು ಒಡೆದಿದ್ದರಿಂದ ಬಿಜೆಪಿಗೆ ದೊಡ್ಡಮಟ್ಟದ ಲಾಭವಾಯಿತು ಎನ್ನಬಹುದು. ಆದರೆ ಕಳೆದ ವಿಧಾನಸಭಾ ಚುನಾವಣೆ ಬಳಿಕ ಒಂದಷ್ಟು ಗೆಲ್ಲುವ ಕುದುರೆಗಳು ಬಿಜೆಪಿ ಪಾಲಾಗಿದ್ದು,ಜತೆಗೆ ಜೆಡಿಎಸ್ ಪ್ರಬಲವಾದಷ್ಟು ಅದರ ಪರಿಣಾಮ ಕಾಂಗ್ರೆಸ್ ಮೇಲೆ ಬೀರಲಿದೆ. ಜತೆಗೆ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಆಡಳಿತ ಪಕ್ಷ ಬಿಜೆಪಿ ವಿರುದ್ಧದ ಒಂದು ಸಂಘಟಿತ ಹೋರಾಟಕ್ಕೆ ಅಡ್ಡಿಯಾಗಿದೆ ಎಂದರೆ ತಪ್ಪಾಗಲಾರದು.
ಗುಜರಾತ್ ಮತ್ತು ಹಿಮಾಚಲಪ್ರದೇಶದ ಫಲಿತಾಂಶ ಜೆಡಿಎಸ್ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಆದರೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಪಾಠವಾಗಿದೆ. ಅದರಲ್ಲೂ ಬಿಜೆಪಿಗೆ ಗುಜರಾತ್ ತಂತ್ರ ವನ್ನು ಕರ್ನಾಟಕದಲ್ಲಿ ಪ್ರಯೋಗ ಮಾಡಬೇಕೋ ಬೇಡವೋ ಎಂಬ ಗೊಂದಲದಲ್ಲಿದೆ. ಎಎಪಿಗೆ ರಾಜ್ಯದಲ್ಲಿ ಸ್ಪರ್ಧೆ ಮಾಡಲು ಧೈರ್ಯ ಬಂದಿದೆ. ಈಗಾಗಲೇ ಬಿಜೆಪಿ ಜನಸಂಕಲ್ಪ ಯಾತ್ರೆ ಮೂಲಕ ರಾಜ್ಯದಲ್ಲಿ ಸಂಚಲನ ಮೂಡಿಸುತ್ತಿದ್ದರೆ, ಜೆಡಿಎಸ್ ನ ಪಂಚರತ್ನ ರಥಯಾತ್ರೆ ಹುಮ್ಮಸ್ಸನ್ನು ಹುಟ್ಟು ಹಾಕಿದೆ. ಆದರೆ ಎಲ್ಲೋ ಒಂದು ಕಡೆ ಕಾಂಗ್ರೆಸ್ ಮೌನಕ್ಕೆ ಶರಣಾದಂತೆ ಭಾಸವಾಗುತ್ತಿದೆ.
ಭಾರತ್ ಜೋಡೋ ಯಾತ್ರೆ ಬಳಿಕ ಕಾಂಗ್ರೆಸ್ ಹೋರಾಟ ಬಲ ಕಳೆದುಕೊಂಡಂತೆ ಕಂಡು ಬರುತ್ತಿದೆ. 224 ಸ್ಥಾನಗಳಿಗೆ ಸುಮಾರು 1200ಕ್ಕೂ ಹೆಚ್ಚು ಮಂದಿ ಅರ್ಜಿಗಳನ್ನು ಹಾಕಿದ್ದು, ಈ ಪೈಕಿ ಅರ್ಹರನ್ನು ಗುರುತಿಸಿ ಅವರಿಗೆ ಟಿಕೆಟ್ ನೀಡುವುದು ಸವಾಲ್ ಆಗಿ ಪರಿಣಮಿಸಿದೆ.