Sunday, September 24, 2023
spot_img
- Advertisement -spot_img

ಹೇಳೋರಿಲ್ಲ.. ಕೇಳೋರಿಲ್ಲ ಮೇಲಾಧಿಕಾರಿಗಳ ಹಿಡಿತ ಕಳೆದುಕೊಂಡ ಹೊಸಪೇಟೆ ನಗರಸಭೆ

ವಿಜಯನಗರ : ಹೊಸಪೇಟೆ ನಗರಸಭೆ ಡಿಮ್ಯಾಂಡ್ ಬುಕ್ ನಾಪತ್ತೆ ಪ್ರಕರಣದಲ್ಲಿ ದಿನಕ್ಕೊಂದರಂತೆ ಬೆಳವಣಿಗೆಗಳು ನಡೆಯುತ್ತಿರುವಾಗಲೇ, ಇಲ್ಲಿ ಸಮಸ್ಯೆ ಹೊತ್ತು ಬಂದ ಜನಸಾಮಾನ್ಯರ ಗೋಳನ್ನು ಯಾರೂ ಕೇಳದವರಿಲ್ಲದಂತಾಗಿದೆ.

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನ ಸಿಬ್ಬಂದಿಗಳನ್ನು ಅಮಾನತು ಮಾಡಿರುವ ಹಿನ್ನೆಲೆಯಲ್ಲಿ ಇತರ ಸಿಬ್ಬಂದಿಗಳಲ್ಲೂ ನಡುಕ ಶುರುವಾಗಿದೆ. ಇದರ ಮಧ್ಯೆ ಅಧಿಕಾರಿಗಳು ಸರಿಯಾಗಿ ಕೆಲಸಕ್ಕೆ ಹಾಜರಾಗುತ್ತಿಲ್ಲ. ಸಿಬ್ಬಂದಿಗಳ ಇಲ್ಲದೆ ನಗರಸಭೆ ಖಾಲಿ ಹೊಡೆಯುತ್ತಿದೆ. ಕಡತ ನಾಪತ್ತೆ ಪ್ರಕರಣದ ಬಿಸಿ ಇತರೇ ಅಧಿಕಾರಿಗಳಿಗೂ ಮುಟ್ಟಿದ್ದು, ಸಸ್ಪೆಂಡ್ ಆಗುವ ಭೀತಿ ಎದುರಿಸುತ್ತಿದ್ದಾರೆ.

ಇದನ್ನೂ ಓದಿ : ‘ಒಂದು ರಾಷ್ಟ್ರ, ಒಂದು ಚುನಾವಣೆ’ ಜಾರಿಯಾದರೆ ಬಿಜೆಪಿಯವರು ಜನರ ಕೈಗೆ ಸಿಗಲ್ಲ’

ಕುಂಟು ನೆಪಗಳನ್ನು ಹೇಳಿ ಕೆಲಸಕ್ಕೆ ಬಾರದೆ ನುಣುಚಿಕೊಳ್ಳುತ್ತಿದ್ದು, ಸಮರ್ಪಕವಾಗಿ ಕೆಲಸ ನಿರ್ವಹಿಸದೆ ಬೇಜವಾಬ್ದಾರಿ ತೋರುತ್ತಿರುವ ಅಧಿಕಾರಿಗಳ ನಡೆ ಸಾರ್ವಜನಿಕರಿಗೆ ತಲೆ ನೋವಾಗಿದೆ. ಸಕಾಲ, ಸೇವಾಸಿಂಧು, ಫಾರಂ – 3, ಇ – ಸ್ವತ್ತು, ಟ್ಯಾಕ್ಸ್ ಫೇ ಹಾಗೂ ನೀರಿನ ಬಿಲ್ ಬಿಲ್ ಪಾವತಿ ಮಾಡುವ ಸಿಬ್ಬಂದಿ ಸೇರಿದಂತೆ ಎಲ್ಲರೂ ಕೆಲಸಕ್ಕೆ ಬಾರದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಅಟೆಂಡರ್‌ನಿಂದ ಹಿಡಿದು ಎಂಜಿನಿಯರ್ ವರೆಗೂ ಕಚೇರಿಯಲ್ಲಿ ಅಧಿಕಾರಿಗಳೇ ಕಾಣದಂತ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಸಿಬ್ಬಂದಿಗಳ ಗೈರು ಹಾಜರಾತಿ ಖಂಡಿಸಿ ಕಮಿಷನರ್ ಚೇಂಬರ್ ಗೆ ಮುತ್ತಿಗೆ ಹಾಕಿ ಸದಸ್ಯರು ಹಾಜರಾತಿ ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.

ಹಾಜರಾತಿ ಪರಿಶೀಲನೆ ವೇಳೆ 80%ರಷ್ಟು ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿಯೇ ಇಲ್ಲ ಎಂಬುದು ಕಮಿಷನರ್‌ ಅವರು ದಂಗಾಗುವಂತೆ ಮಾಡಿದೆ. ರಿಜಿಸ್ಟರ್‌ನಲ್ಲಿ ಸಹಿಯನ್ನೂ ಮಾಡದೆ, ಇತ್ತ ಮೇಲಾಧಿಕಾರಿಗಳಿಗೆ ಕಾರಣವನ್ನು ಹೇಳದೆ ಅಧಿಕಾರಿಗಳು ನಾಪತ್ತೆಯಾಗಿರುವುದು ನಗರಸಭೆಯ ಕೈತಪ್ಪಿ ಹೋಗಿರುವ ಆಡಳಿತಕ್ಕೆ ಸಾಕ್ಷಿಯಾಗಿದೆ.

ನಗರಸಭೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವವರು ಇಲ್ಲದಂತಾಗಿದ್ದು, ಅಧಿಕಾರಿಗಳನ್ನು ನಿಯಂತ್ರಿಸುವಲ್ಲಿ ಕಮಿಷನರ್ ವಿಫಲರಾಗಿದ್ದಾರೆಂದು ಸಾರ್ವಜನಿಕರು ಗೋಳು ತೋಡಿಕೊಂಡಿದ್ದಾರೆ. ಹಿಡಿತ ಕಳೆದುಕೊಂಡಿರುವ ಇಲ್ಲಿನ ಆಡಳಿತ ವ್ಯವಸ್ಥೆ ಹಾಗೂ ಕಾರಣ ನೀಡದೆ ಕರ್ತವ್ಯಕ್ಕೆ ಗೈರಾಗುವ ಅಧಿಕಾರಿಗಳಿಗೆ ಸರ್ಕಾರದ ಭಯ ಇಲ್ಲದಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles