ಹಾಸನ: ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರ್ನಾಟಕದ ಹೊಯ್ಸಳ ಸಾಮ್ರಾಜ್ಯದ ದೇವಾಲಯಗಳು ಸೇರ್ಪಡೆಗೊಂಡಿವೆ. ಈ ಮಾಹಿತಿಯನ್ನು ಯುನೆಸ್ಕೋ ಟ್ವಿಟರ್‌ನಲ್ಲಿ ಘೋಷಣೆ ಮಾಡಿದೆ.
ಹೊಯ್ಸಳರ ಕಾಲದಲ್ಲಿ ನಿರ್ಮಿಸಿರುವ ಸೋಮನಾಥಪುರದ ಕೇಶವ ದೇವಸ್ಥಾನ, ಬೇಲೂರಿನ ಚನ್ನಕೇಶವ ದೇವಸ್ಥಾನ ಹಾಗೂ ಹಳೆಬೀಡಿನ ಹೊಯ್ಸಳೇಶ್ವರ ದೇವಸ್ಥಾನಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿವೆ.






ಈ ಬಗ್ಗೆ ಪ್ರಧಾನಿ ನರೇಂದ್ರ ಅವರು ಸಂತಸ ವ್ಯಕ್ತಪಡಿಸಿದ್ದು, ಹೊಯ್ಸಳ ದೇವಾಲಯಗಳ ಕಾಲಾತೀತ ಸೌಂದರ್ಯ ಮತ್ತು ಸಂಕೀರ್ಣ ವಿವರಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನಮ್ಮ ಪೂರ್ವಜರ ಅಸಾಧಾರಣ ಕರಕುಶಲತೆಗೆ ಸಾಕ್ಷಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಕನ್ನಡಿಗರು ಹೆಮ್ಮೆ ಪಡುವ ವಿಷಯ: ತೇಜಸ್ವಿ ಸೂರ್ಯ
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ತೇಜಸ್ವಿ ಸೂರ್ಯ, ಇದು ಸಮಸ್ತ ಕನ್ನಡಿಗರು ಹೆಮ್ಮೆ ಪಡುವ ವಿಷಯ. 2022-23ನೇ ಸಾಲಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕರ್ನಾಟಕದ ಹೊಯ್ಸಳ ಶೈಲಿಯ ಹಳೇಬೀಡು, ಬೇಲೂರು & ಸೋಮನಾಥಪುರದ ದೇವಾಲಯಗಳನ್ನು ನಾಮನಿರ್ದೇಶನಗೊಳಿಸಿ, ಯುನೆಸ್ಕೋಗೆ ಕಳುಹಿಸಿದ್ದು ಅಭಿನಂದನಾರ್ಹ ಎಂದು ಟ್ವೀಟ್ ಮಾಡಿದ್ದಾರೆ.
ಹೊಯ್ಸಳರ ವಾಸ್ತುಶಿಲ್ಪ ಶೈಲಿಯನ್ನು ಕರ್ನಾಟಕ ದ್ರಾವಿಡ ಶೈಲಿಯೆಂದು ಕರೆಯಲಾಗಿದ್ದು, ಇದು ಸ್ವತಂತ್ರ ವಾಸ್ತುಶಿಲ್ಪದ ಸಂಪ್ರದಾಯವಾಗಿ ಅನನ್ಯ ಲಕ್ಷಣಗಳನ್ನು ಹೊಂದಿದೆ. ಬೇಲೂರಿನ ಚೆನ್ನಕೇಶವ ದೇವಸ್ಥಾನ, ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನ, ಸೋಮನಾಥಪುರದ ಚೆನ್ನಕೇಶವ ದೇವಸ್ಥಾನ ವಾಸ್ತುಶಿಲ್ಪಕ್ಕೆ ಹಿಡಿದ ಕನ್ನಡಿ ಎಂದು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ ಹೆಚ್.ಡಿ. ದೇವೇಗೌಡರ ಕನಸಿನ ಕೂಸು: ಸಂಸದೆ ಕವಿತಾ
ಬೇಲೂರು ಹಳೇಬೀಡು ಶಿಲ್ಪಕಲೆಗಳ ಸೌಂದರ್ಯಕ್ಕೆ ಹೆಸರುವಾಸಿಯಾದರೆ, ಹೊಯ್ಸಳ ಕಲೆಯ ಸಂಪೂರ್ಣ ಅಭಿವ್ಯಕ್ತಿಯನ್ನು ಇತರ ಸಣ್ಣ ದೇವಸ್ಥಾನಗಳಲ್ಲಿ ಕಾಣಬಹುದು. ಹಳೇಬೀಡು ದೇವಾಲಯವು ಹಿಂದೂ ವಾಸ್ತುಶಿಲ್ಪದ ಮಹೋನ್ನತ ಉದಾಹರಣೆಯಾಗಿದ್ದು, ಭಾರತೀಯ ವಾಸ್ತುಶಿಲ್ಪಕ್ಕೆ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಹೊಯ್ಸಳ ಸಾಮ್ರಾಜ್ಯದ ಅಧಿಪತ್ಯದಲ್ಲಿ ಕನ್ನಡವೇ ಆಸ್ಥಾನದ ಭಾಷೆಯಾಗಿ ಪ್ರಾಬಲ್ಯ ಪಡೆದುಕೊಂಡಿತು. ಶಾಸನಗಳಲ್ಲಿ ಹೆಚ್ಚಾಗಿ ಕನ್ನಡವನ್ನು ಉಪಯೋಗಿಸಲಾಗಿದ್ದು ಗಮನಾರ್ಹ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.