ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸ್ವಾಗತಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಸ್ಟಾಲಿನ್ ಅವರು, ಆರು ಮಂದಿಯನ್ನು ಬಿಡುಗಡೆಗೊಳಿಸುವ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಉನ್ನತ ನ್ಯಾಯಾಲಯದ ತೀರ್ಪಿನ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ಇದು ಪ್ರಜಾಪ್ರಭುತ್ವದ ಸಿದ್ಧಾಂತಕ್ಕೆ ಐತಿಹಾಸಿಕ ತೀರ್ಪಾಗಿದೆ ಎಂದು ತಿಳಿಸಿದ್ದಾರೆ.
ರಾಜೀವ್ ಗಾಂಧಿಯವರು 1991ರ ಮೇ 21 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ತಮಿಳು ಟೈಗರ್ಸ್ ಎಲ್‍ಟಿಟಿಇ ಗುಂಪಿನ ಮಹಿಳಾ ಆತ್ಮಾಹುತಿ ಬಾಂಬರ್‍ನಿಂದ ಹತ್ಯೆಗೀಡಾಗಿದ್ದರು. ಈ ಪ್ರಕರಣದಲ್ಲಿ ನಳಿನಿ ಅಲ್ಲದೆ ಶ್ರೀಹರನ್, ಸಂತನ್, ಮುರುಗನ್, ರಾಬರ್ಟ್ ಪಾಯಸ್ ಹಾಗೂ ರವಿಚಂದ್ರನ್ ಜೈಲು ಪಾಲಾಗಿದ್ದರು. ಜನರಿಂದ ಚುನಾಯಿತವಾದ ಸರ್ಕಾರದ ನಿರ್ಧಾರಗಳು ಮತ್ತು ರಾಜ್ಯಪಾಲರ ಸ್ಥಾನದಲ್ಲಿರುವವರ ನಿರ್ಧಾರಗಳಿಗೆ ಅಡ್ಡಿಪಡಿಸಬಾರದು ಎಂಬುದಕ್ಕೆ ಸುಪ್ರೀಂ ಕೋರ್ಟ್‍ನ ತೀರ್ಪು ಸಾಕ್ಷಿಯಾಗಿದೆ.
ಡಿಎಂಕೆ ಸರ್ಕಾರವಿದ್ದಾಗಲೂ ಮತ್ತು ಪ್ರತಿಪಕ್ಷದಲ್ಲಿದ್ದಾಗಲೂ ಇವರನ್ನು ಬಿಡುಗಡೆಗೊಳಿಸುವಂತೆ ಜನರ ಪರವಾಗಿ ಧ್ವನಿ ಎತ್ತಿತ್ತು ಎಂದು ಹೇಳಿದ್ದಾರೆ.ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿ ಶ್ರೀಹರನ್ ಮತ್ತು ಇತರೆ ಐವರು ಮಂದಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು. ಆದರೆ ಜೈನಲ್ಲಿ ಒಳ್ಳೆಯ ನಡತೆ ರೂಢಿಸಿಕೊಂಡ ಆಧಾರದ ಹಿನ್ನೆಲೆ ಆರು ಮಂದಿಯನ್ನು ಸುಪ್ರೀಂಕೋರ್ಟ್ ಬಿಡುಗಡೆಗೊಳಿಸಿದೆ.