ಹುಬ್ಬಳ್ಳಿ: ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಅಹೋರಾತ್ರಿ ಧರಣಿಗೆ ಮಣಿದಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ 3 ದಿನಗಳ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದೆ.
ಗಣೇಶೋತ್ಸವಕ್ಕೆ ಪಾಲಿಕೆ ಅನುಮತಿ ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ಧರ್ಮದ ಪರ ಹೋರಾಟಕ್ಕೆ ಸಂದ ಜಯ’ ಎಂದು ಹೇಳಿದ್ದಾರೆ.
ಈ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ಹುಬ್ಬಳ್ಳಿಯ ಚೆನ್ನಮ್ಮ ಮೈದಾನದಲ್ಲಿ ಗಣಪತಿ ಪ್ರತಿಷ್ಟಾಪನೆಗೆ ಅನುಮತಿ ನೀಡದೆ ಅಡ್ಡಿಪಡಿಸಿದ್ದ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿಯ ವಿರುದ್ಧ ಭಾರತೀಯ ಜನತಾ ಪಕ್ಷ ಹಾಗೂ ಭಕ್ತರು ನಡೆಸಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಮಣಿದ ಜಿಲ್ಲಾಡಳಿತ ಇದೀಗ ಗಣಪತಿ ಪ್ರತಿಷ್ಟಾಪನೆಗೆ ಅವಕಾಶ ನೀಡಿದೆ. ಸರ್ಕಾರದ ಧರ್ಮ ವಿರೋಧಿ ನೀತಿಯ ವಿರುದ್ಧ ನಿರಂತರವಾಗಿ ಹೋರಾಟದಲ್ಲಿ ಭಾಗಿಯಾದ ಪಕ್ಷದ ಎಲ್ಲ ಪ್ರಮುಖರಿಗೂ – ಭಕ್ತರಿಗೂ ಅನಂತಾನಂತ ಧನ್ಯವಾದಗಳು’ ಎಂದು ಹೇಳಿದ್ದಾರೆ.


ಪಾಲಿಕೆ ಸರ್ವ ಸದಸ್ಯರ ಸಭೆಯಲ್ಲಿ ಠರಾವ್ ಪಾಸ್ ಮಾಡಿದ್ದರ ಹಿನ್ನೆಲೆಯಲ್ಲಿ ದಿ.19ರಿಂದ 21ರವರೆಗೆ ಗಣಪತಿ ಪ್ರತಿಷ್ಠಾಪಿಸಲು ಆಯುಕ್ತರು ಶುಕ್ರವಾರ ರಾತ್ರಿ ರಾಣಿ ಚೆನ್ನಮ್ಮ ಮೈದಾನ ಗಜಾನನೋತ್ಸವ ಮಹಾಮಂಡಳಿಗೆ 18 ಷರತ್ತು ಗಳನ್ನು ವಿಧಿಸಿ ಆದೇಶ ಪತ್ರ ನೀಡಿದ್ದಾರೆ.
ಇದನ್ನೂ ಓದಿ; ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಕೊನೆಗೂ ಅನುಮತಿ
ಗಣೇಶೋತ್ಸವಕ್ಕೆ ಅನುಮತಿ ನೀಡುವಂತೆ ನಿನ್ನೆ ಹೈಕೋರ್ಟ್ ಪೀಠ ಅಂಜುಮನ್ ಸಂಸ್ಥೆ ಸಲ್ಲಿಸಿದ್ದ ಮನವಿ ತಿರಸ್ಕರಿಸಿ, ಗಣೇಶ ಪ್ರತಿಷ್ಠಾಪನೆಗೆ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ತೀರ್ಪು ಹೊರ ಬರುತ್ತಿದ್ದಂತೆಯೇ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕು ಎಂದು ನಿನ್ನೆಯಿಂದ ಪಾಲಿಕೆ ಆವರಣದಲ್ಲಿ ಧರಣಿ, ಭಜನೆಗಳ ಮೂಲಕ ಪ್ರತಿಭಟನೆ ನಡೆಸಿದ್ದ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಗಣೇಶನ ವಿಗ್ರಹದೊಂದಿಗೆ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು.
ಪಾಲಿಕೆ ನೀಡಬೇಕಾಗಿದ್ದ ಅನುಮತಿ ವಿಳಂಭ ಖಂಡಿಸಿ ಬಿಜೆಪಿ ಮುಖಂಡರು ಸಿಎಂ ಪ್ರತಿಕ್ರತಿ ದಹನ ಮಾಡಿ ಆಕ್ರೋಶ ಹೊರಹಾಕಿದ್ದರು. ಸೆ. 19 ರಂದು ಬೆಳಿಗ್ಗೆ 8 ಘಂಟೆಒಳಗೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಸೆ.21ರಂದು ಮಧ್ಯಾಹ್ನ 12 ರೊಳಗೆ ವಿಸರ್ಜನೆ ಮಾಡಬೇಕು ಎನ್ನುವ ಷರಿತ್ತಿನೊಂದಿಗೆ ಪಾಲಿಕೆ ಅನುಮತಿ ನೀಡಿದೆ. ಕಳೆದ ಬಾರಿಯೂ ಇದೇ ರೀತಿ 3 ದಿನ ಅನುಮತಿ ನೀಡಲಾಗಿತ್ತು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.