ಜೈಪುರ: ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಮತ್ತೆ ಮಹಾಯುದ್ಧವೇ ಶುರುವಾಗಿದೆ. ಅಶೋಕ್ ಗೆಹ್ಲೋಟ್ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವಂತೆಯೇ ಅವರ ಸಿಎಂ ಸ್ಥಾನ ಯಾರಿಗೆ ಹೋಗುತ್ತೆ ಎಂಬ ಪ್ರಶ್ನೆಯೇ ಈಗ ಬಿಕ್ಕಟ್ಟಿಗೆ ಕಾರಣವಾಗಿದೆ.
ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಪಕ್ಷದಲ್ಲಿ ಭಾರೀ ಬಿಕ್ಕಟ್ಟು ಉಂಟಾಗಿದ್ದು, ಅಶೋಕ್ ಗೆಹ್ಲೋಟ್ ಬಣದ 90ಕ್ಕೂ ಹೆಚ್ಚು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೈಡ್ರಾಮಾ ಆರಂಭಿಸಿದ್ದಾರೆ. ರಾಹುಲ್ ಗಾಂಧಿ ಸೂಚನೆ ಪ್ರಕಾರ ಅಶೋಕ್ ಗೆಹ್ಲೋಟ್ ಒಂದು ವೇಳೆ ಎಐಸಿಸಿ ಅಧ್ಯಕ್ಷರಾದ್ರೆ ರಾಜಸ್ಥಾನ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ. ಆದರೆ, ಗೆಹ್ಲೋಟ್ ಅವರಿಗೆ ಈ ವಿಚಾರದಲ್ಲಿ ವಿನಾಯಿತಿ ನೀಡಬೇಕು. ಅವರು ಎರಡೂ ಹುದ್ದೆಗಳನ್ನು ಏಕಕಾಲದಲ್ಲಿ ಹೊಂದಲು ಅವಕಾಶ ನೀಡಬೇಕು ಎಂದು 90ಕ್ಕೂ ಹೆಚ್ಚು ಶಾಸಕರು ಪಟ್ಟುಹಿಡಿದಿದ್ದಾರೆ. ಅಲ್ಲದೇ ಸಚಿನ್ ಪೈಲಟ್ ಅವರಿಗೆ ಸಿಎಂ ಸ್ಥಾನ ನೀಡುವುದನ್ನು ಧಿಕ್ಕರಿಸಿ ಇದೀಗ ಗೆಹ್ಲೋಟ್ ಬಣದ ಶಾಸಕರು ಹೈಡ್ರಾಮಾ ಆರಂಭಿಸಿದ್ದಾರೆ. ಒಂದು ವೇಳೆ ಸಚಿನ್ ಪೈಲಟ್‌ಗೆ ಸಿಎಂ ಸ್ಥಾನ ನೀಡಿವುದೇ ಆದ್ರೆ ಅವರ ಬದಲು ನಮ್ಮಲ್ಲಿಯೇ ಯಾರಾದರೂ ಅನುಭವಿ ರಾಜಕಾರಣಿಗಳಿಗೆ ಸಿಎಂ ಸ್ಥಾನ ನೀಡಿ ಎಂದು ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಇದಾಗದೇ ಹೋದಲ್ಲಿ ಹಲವು ಶಾಸಕರು ಕಾಂಗ್ರೆಸ್ ತೊರೆಯುವುದಾಗಿಯೂ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ನಡೆಸಲು ನಿರ್ಣಾಯಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಹೈಕಮಾಂಡ್ ಕರೆಸಿತ್ತು. ಆದರೆ ಇದೀಗ ಶಾಸಕರು ನಡೆಸುತ್ತಿರುವ ಹೈಡ್ರಾಮಾದ ಹಿನ್ನೆಲೆ ಸಭೆಯನ್ನೇ ರದ್ದುಗೊಳಿಸಲಾಗಿದೆ.