ಬೆಂಗಳೂರು: ರಾಮನಗರದ ಮೆಡಿಕಲ್ ಕಾಲೇಜು ಸ್ಥಳಾಂತರ ಮಾಡಿರುವ ಸಂಬಂಧ ರಾಮನಗರ ಬಂದ್ ಮಾಡಲಾಗಿತ್ತು. ಈ ನಡುವೆ ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬೆಂಬಲ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮೆಡಿಕಲ್ ಕಾಲೇಜು ರಾಮನಗರ ಜಿಲ್ಲೆಯ ಜನತೆಯ ಹಕ್ಕು. ಅದಕ್ಕಾಗಿ ಹೋರಾಟ ಮಾಡುವ ಹಕ್ಕೂ ಅವರಿಗಿದೆ. ಹೀಗಾಗಿ ಪಕ್ಷಾತೀತವಾಗಿ ನಡೆಯುತ್ತಿರುವ ರಾಮನಗರ ಬಂದ್‌ಗೆ ನನ್ನ ಸಂಪೂರ್ಣ ಬೆಂಬಲವಿದೆ. ನೇರವಾಗಿ ಭಾಗವಹಿಸಿ ರಾಜಕೀಯ ಬೆರೆಸುವುದು ನನಗೆ ಇಷ್ಟವಿಲ್ಲ. ಮೆಡಿಕಲ್ ಕಾಲೇಜು ಬೇಕೆನ್ನುವ ರಾಮನಗರ ಜನರ ಒತ್ತಾಯಕ್ಕೆ ನನ್ನ ಸಹಮತ ಇದೆ ಎಂದಿದ್ದಾರೆ.
ಇದನ್ನೂ ಓದಿ: ‘ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ನನಗೆ ಗೊತ್ತಿಲ್ಲ’
2006-07ರಲ್ಲೇ ₹310 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ಸೇರಿ ರಾಮನಗರದಲ್ಲಿ ರಾಜೀವ್ ಗಾಂಧಿ ವಿವಿ ಸಮುಚ್ಚಯ ಸ್ಥಾಪನೆಗೆ ಅಂದಿನ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಆಡಳಿತಾತ್ಮಕ ಮಂಜೂರಾತಿ ನೀಡಿದ್ದರು. ಮತ್ತೆ 25-3-2019ರಂದು ಸಿಎಂ ಆಗಿದ್ದ ಕುಮಾರಣ್ಣ ಅವರು ಆ ಯೋಜನೆಯ ವೆಚ್ಚವನ್ನು ₹540 ಕೋಟಿಗೆ ಹೆಚ್ಚಿಸಿದ್ದರು ಎಂದಿದ್ದಾರೆ.
ಮೈತ್ರಿ ಸರ್ಕಾರದ ಅವಧಿಯಲ್ಲಿ ಕನಕಪುರಕ್ಕೂ ಪ್ರತ್ಯೇಕ ಮೆಡಿಕಲ್ ಕಾಲೇಜು ಬೇಕು ಎಂದು ಅಂದು ಡಿ.ಕೆ. ಶಿವಕುಮಾರ್ ಅವರೇ ಒತ್ತಡ ಹೇರಿದ್ದರು. 13-12-2018ರಲ್ಲಿ ₹450 ಕೋಟಿ ವೆಚ್ಚದ ಮೆಡಿಕಲ್ ಕಾಲೇಜನ್ನು ಕುಮಾರಣ್ಣ ಅವರು ಕನಕಪುರಕ್ಕೂ ಮಂಜೂರು ಮಾಡಿದ್ದರು ಎಂದು ನಿಖಿಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿ ಸುದ್ದಿ; ಶಾಸಕ ಹೆಚ್.ಡಿ. ರೇವಣ್ಣ ಏನಂದ್ರು?
ಬಳಿಕ ಬಿಜೆಪಿ ಸರ್ಕಾರ ರಾಮನಗರ ಮೆಡಿಕಲ್ ಕಾಲೇಜು ಹಾಗೂ ರಾಜೀವ್ ಗಾಂಧಿ ವಿವಿ ಸಮುಚ್ಚಯ ನಿರ್ಮಾಣಕ್ಕೆ ₹610 ಕೋಟಿ ವೆಚ್ಚದಲ್ಲಿ ಗುದ್ದಲಿಪೂಜೆ ನೆರವೇರಿಸಿತ್ತು. ಎರಡು ತಿಂಗಳ ಹಿಂದೆ ಬಂದ ಕಾಂಗ್ರೆಸ್ ಸರ್ಕಾರವು ರಾಮನಗರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಹೈಜಾಕ್ ಮಾಡುವ ಮೂಲಕ ರಾಮನಗರ ಜನತೆಗೆ ದ್ರೋಹ ಎಸಗಿದೆ ಎಂದು ನಿಖಿಲ್ ಆರೋಪಿಸಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಒತ್ತಡದಿಂದಲೇ ರಾಮನಗರ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರ ಮಾಡುವುದಾಗಿ ಸ್ವತಃ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರೇ ಹೇಳಿದ್ದರು. ಹಾಗಾದರೆ, ಈ ಸರಕಾರ ಯಾರನ್ನು ಯಾಮಾರಿಸಲು ಹೊರಟಿದೆ. ಡಬಲ್ ಗೇಮ್ ಆಡುತ್ತಿರುವುದು ಯಾವ ಪುರುಷಾರ್ಥಕ್ಕೆ? ಸುಖಾ ಸುಮ್ಮನೆ ಗೊಂದಲ ಯಾಕೆ? ಎಂದು ಡಿಕೆ ಶಿವಕುಮಾರ್ ವಿರುದ್ಧವೂ ಕಿಡಿಕಾರಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.