ಉತ್ತರ ಕನ್ನಡ: ಕಾಂಗ್ರೆಸ್ ಸೇರ್ಪಡೆ ಕುರಿತು ಭವಿಷ್ಯ ನುಡಿಯಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಮಾರ್ಮಿಕವಾಗಿ ಹೇಳಿದ್ದಾರೆ. ಮುಂಡಗೋಡ ತಾಲೂಕಿನ ಐಬಿಯಲ್ಲಿ ಮಾತನಾಡಿದ ಅವರು, ನಾನು ಇವತ್ತಿನ ತನಕ ಬಿಜೆಪಿ ಪಕ್ಷದಲ್ಲಿ ಇದ್ದೇನೆ, ಬಿಜೆಪಿ ಶಾಸಕನಾಗಿದ್ದೇನೆ ಎಂದಿದ್ದಾರೆ.
ಮುಂದಿನ ತಿಂಗಳು ಕಾಂಗ್ರೆಸ್ ಸೇರ್ಪಡೆಯಾಗುತ್ತೀರ ಎಂಬ ಸುದ್ದಿ ಹರಡುತ್ತಿದೆ ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ ಭವಿಷ್ಯ ಹೇಳಲು ನಾನು ಜ್ಯೋತಿಷಿ ಅಲ್ಲ, ಅದರ ಬಗ್ಗೆ ನನಗೇನು ಗೊತ್ತಿಲ್ಲಾ ಎಂದಿದ್ದಾರೆ.
ಇದನ್ನೂ ಓದಿ: ‘ಕುಮಾರಸ್ವಾಮಿ ದಾಖಲೆ ಇಲ್ಲದೆ ಮಾತಾಡಲ್ಲ; ಲಘುವಾಗಿ ಮಾತಾಡೋದು ಬೇಡ’
ಕಾಂಗ್ರೆಸ್ ಸೇರ್ಪಡೆ ಒಂದು ವದಂತಿ ಆ ರೀತಿ ಯಾವುದೇ ವಿಚಾರ ಮಾಡಿಲ್ಲ. ನಾನು ಬಿಜೆಪಿ ಪಕ್ಷದ ಶಾಸಕನಾಗಿದ್ದೇನೆ ಅಲ್ಲಿಯೇ ಮುಂದುವರೆಯುತ್ತೇನೆ ಎಂದರು. ಮುಖ್ಯಮಂತ್ರಿ ಭೇಟಿ ಆಗಿದ್ದು ನನ್ನ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ಎಂದು ಮನವಿ ಸಲ್ಲಿಸಿಲು ಹೊರತು ಪಕ್ಷ ಸೇರ್ಪಡೆ ಕುರಿತು ಮಾತನಾಡಲು ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬೆನ್ನಲ್ಲೇ ಮಾಜಿ ಸಚಿವ ಶಿವರಾಂ ಹೆಬ್ಬಾರ್ ಸಹ ಸಿದ್ದರಾಮಯ್ಯರ ಭೇಟಿ ಮಾಡಿದ್ದರು.
ಇದನ್ನೂ ಓದಿ: ʼಕಾಂಗ್ರೆಸ್ ತತ್ತ್ವ, ಸಿದ್ದಾಂತ ನಂಬಿರೋರು ಪಕ್ಷ ಸೇರ್ತಿದ್ದಾರೆʼ
ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರವನ್ನು ಬರ ಪೀಡಿತ ತಾಲ್ಲೂಕಿನ ವ್ಯಾಪ್ತಿಗೆ ಸೇರಿಸುವಂತೆ ಮನವಿ ಮಾಡಿದ್ದರು. ಮಳೆ ಪ್ರಮಾಣ ಶೇ. 70ಕ್ಕಿಂತ ಕಡಿಮೆ ಬಂದಿದೆ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಿಟ್ಟಿನಲ್ಲಿ ರೈತರ ಹಿತದೃಷ್ಟಿಯಿಂದ ಯಲ್ಲಾಪುರ, ಮುಂಡಗೋಡ ಮತ್ತು ಶಿರಸಿ ಪೂರ್ವ ಭಾಗವಾದ ಬನವಾಸಿ ಹೋಬಳಿಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಮನವಿ ಮಾಡಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.