ಗೌರಿಬಿದನೂರು: ಬಿಜೆಪಿಯವರಿಂದ ಕಾನೂನು ಕಲಿಯುವ ಅಗತ್ಯವಿಲ್ಲ. ನಾನು ಇಂಜಿನಿಯರಿಂಗ್ ಓದಿ ರಾಜಕಾರಣಕ್ಕೆ ಬಂದವನಲ್ಲ, ಕಾನೂನು ಓದಿ ಬಂದವನು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಗೌರಿಬಿದನೂರಿನಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಶೇ 40% ನಷ್ಟು ಕಮಿಷನ್ ಪಡೆಯುವ ಸರ್ಕಾರವಿದೆ. ಇದನ್ನು ಸಾಕ್ಷಿ ಸಮೇತ ಜನರ ಮುಂದಿಡಲು ಮುಂದಾಗಿದ್ದೇವೆ. ಇದಕ್ಕೆ ಪ್ರತಿಯಾಗಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ನನಗೂ ಕಾನೂನು ಚೆನ್ನಾಗಿ ಗೊತ್ತು. ನಾನು ಇಂಜಿನಿಯರಿಂಗ್ ಪದವಿ ಪಡೆದು ರಾಜಕಾರಣಕ್ಕೆ ಬಂದವನಲ್ಲ. ಕಾನೂನು ಓದಿ ರಾಜಕಾರಣಕ್ಕೆ ಬಂದವನು ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಟಾಂಗ್ ನೀಡಿದ್ರು.
ಇನ್ನು ಮುಂದುವರೆದು ಮಾತನಾಡಿದ ಅವರು, ಜಾತಿಗೂ ಭ್ರಷ್ಟಾಚಾರಕ್ಕೂ ಏನು ಸಂಬಂಧ? ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬಿಜೆಪಿಯವರು ಈಗ ಜಾತಿ ಬಣ್ಣ ಕಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ಬಿಜೆಪಿ ಅಭಿಯಾನ ಆರಂಭಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಶೇ.40 % ಕಮಿಷನ್ ಬಗ್ಗೆ ಗುತ್ತಿಗೆದಾರರ ಸಂಘ ಮಾಡಿದ್ದ ಆರೋಪದ ಬಗ್ಗೆ ನಾವು ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದೇವೆ ಎಂದರು. ಇನ್ನು ಸಿದ್ದರಾಮಯ್ಯ ಸರ್ಕಾರ ಶೇ. 10% ಸರ್ಕಾರ ಎಂದು ನರೇಂದ್ರ ಮೋದಿ ಸುಳ್ಳು ಆರೋಪ ಮಾಡಿದ್ದರು. ಏನೂ ಆಧಾರ ಇಲ್ಲದೆ ನನ್ನ ಮೇಲೆ ಈ ಆರೋಪ ಮಾಡಿದ್ದರು. ನಾನು ಕುರುಬ ಎಂದು ಮೋದಿ ಆರೋಪ ಮಾಡಿದ್ರಾ ಎಂದು ಪ್ರಶ್ನಿಸಿದ್ರು. ನನ್ನ ಮೇಲೂ ಸುಳ್ಳು, ಸುಳ್ಳು ಪುಸ್ತಕವನ್ನು ಬಿಜೆಪಿವರು ಹೊರಡಿಸಿದ್ದಾರೆ. ನಾನು ಕುರುಬ ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆಂದು ನಾನು ಹೇಳಬಹುದೆ? ಎಂದು ಪ್ರಶ್ನಿಸಿದ್ರು.