ಬೆಂಗಳೂರು: ಬ್ರಾಹ್ಮಣ ಸಮುದಾಯವೂ ಸೇರಿ ನಾನು ಯಾವುದೇ ಸಮಾಜಕ್ಕೂ ಅಗೌರವ ತೋರಿಲ್ಲ. ತೋರುವುದೂ ಇಲ್ಲ ಬ್ರಾಹ್ಮಣರು ಮುಖ್ಯಮಂತ್ರಿಯಾಗುವುದನ್ನು ನಾನು ವಿರೋಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಬ್ರಾಹ್ಮಣ ಸಮಾಜದ ಅವಹೇಳನ ಮಾಡಿಲ್ಲ, ಮರಾಠ ಪೇಶ್ವೆಗಳ ಡಿಎನ್ಎ ಇರುವ ವ್ಯಕ್ತಿಯನ್ನು ಕರ್ನಾಟಕಕ್ಕೆ ಮುಖ್ಯಮಂತ್ರಿ ಮಾಡಲು ಬಿಜೆಪಿ ಮತ್ತು ಆರ್ ಎಸ್ಎಸ್ ಹೊರಟಿವೆ ಎಂದು ಹೇಳಿದ್ದೆನೆಯೇ ಹೊರತು ರಾಜ್ಯದ ಬ್ರಾಹ್ಮಣ ಸಮುದಾಯ ನಾನೆಲ್ಲೂ ನಿಂದಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ಹೇಳಿಕೆಯನ್ನು ತಿರುಚುವ ಪ್ರಯತ್ನ ವ್ಯವಸ್ಥಿವಾಗಿ ನಡೆಸಲಾಗುತ್ತಿದೆಯೇ ಹೊರತು ನಾನು ಎತ್ತಿದ ವಿಷಯದ ಬಗ್ಗೆ ಚರ್ಚೆಗಳಾಗುತ್ತಿಲ್ಲ. ಪೇಶ್ವೆಗಳ ಡಿಎನ್ಎ ಇರುವ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿಯವರು ಹುನ್ನಾರ ಮಾಡಿದ್ದಾರೆಂದು ನಾನು ಹೇಳಿದ್ದೆ. ಇದಕ್ಕೆ ಯಾಕೆ ಗಾಬರಿ? ಎಂದು ಸ್ಪಷ್ಟವಾಗಿ ನುಡಿದರು.
ಕರ್ನಾಟಕದಲ್ಲಿ ಇರುವ ಬ್ರಾಹ್ಮಣ ಸಮಾಜದ ಬಗ್ಗೆ ನನಗೆ ಗೌರವ ಇದೆ. ನಮ್ಮ ಕುಟುಂಬ ಬ್ರಾಹ್ಮಣ ಸಮಾಜ ಮತ್ತು ಶೃಂಗೇರಿ ಮಠದ ಬಗ್ಗೆ ಗೌರವ ಇಟ್ಟುಕೊಂಡು ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.