Friday, September 29, 2023
spot_img
- Advertisement -spot_img

‘ರೈತರ ಪ್ರತಿಭಟನೆಗೆ ನನ್ನ ವಿರೋಧ ಇಲ್ಲ; ಬಿಜೆಪಿಯವರಿಗೆ ತಿಳುವಳಿಕೆ ಇಲ್ವಾ?’

ಬೆಂಗಳೂರು: ತಮಿಳುನಾಡಿಗೆ ಕೆಆರ್‌ಎಸ್‌ ಡ್ಯಾಂನಿಂದ ನೀರು ಹರಿಸಿದ್ದರ ಬಗ್ಗೆ ರೈತರ ಪ್ರತಿಭಟನೆಗೆ ನನ್ನ ವಿರೋಧ ಇಲ್ಲ; ಅವರ ಸಮಸ್ಯೆ ಸರ್ಕಾರದ ಗಮನಕ್ಕೆ ತರಬೇಕು ತರ್ತಾ ಇದ್ದಾರೆ. ಆದರೆ, ಬಿಜೆಪಿ ಪ್ರತಿಭಟನೆ ಇದ್ಯಲಾ ಅದು…. ಅದಕ್ಕೆ ಪದಗಳೇ ಬರ್ತಾ ಇಲ್ಲ’ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ನಗರದಲ್ಲಿ ಮಾತನಾಡಿದ ಚೆಲುವರಾಯಸ್ವಾಮಿ, ‘ಕೇಂದ್ರದಲ್ಲಿ ಸರ್ಕಾರ ನಡೆಸ್ತಾ ಇರುವ ರಾಷ್ಟ್ರೀಯ ಪಕ್ಷಕ್ಕೆ ಕನಿಷ್ಠ ತಿಳುವಳಿಕೆ ಇಲ್ವಾ? ತಮಿಳುನಾಡಿನವರು ನೀರು ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಕಾವೇರಿ ನೀರು ನಿರ್ವಹಣಾ ಮಂಡಳಿ ಮುಂದೆ ಅಧಿಕಾರಿಗಳು ಪರಿಸ್ಥಿತಿ ಮನವರಿಕೆ ಮಾಡಿದಾಗ 10 ಸಾವಿರ ಕ್ಯುಸೆಕ್ ಬಿಡುವ ನಿರ್ಧಾರ ಮಾಡಿದ್ದಾರೆ. ಬಿಜೆಪಿಯ ರಾಜ್ಯಸಭೆ, ಲೋಕಸಭಾ ಸದಸ್ಯರು ಕೇಂದ್ರದ ಬಳಿ ಅನ್ಯಾಯದ ಬಗ್ಗೆ ಮಾತಾಡೋದು ಬಿಟ್ಟು, ಚುನಾವಣೆಗಾಗಿ ರಾಜಕಾರಣ ಮಾಡ್ತಾ ಇದ್ದಾರೆ, ಅದು ಮಾಡಬಾರದು’ ಎಂದು ಕಿಡಿಕಾರಿದರು.

‘ಹಿಂದೆ ಗೋವಾ, ಕರ್ನಾಟಕ ಹಾಗೂ ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇತ್ತು. ಆಗ ಮಹದಾಯಿ ಸಮಸ್ಯೆ ಯಾಕೆ ಬಗೆಹರಿಸಲಿಲ್ಲ? ನಮಗೆ ತಮಿಳುನಾಡಿನ ಜೊತೆ ಹೊಂದಾಣಿಕೆ ಇರಬಹುದು. ಆದರೆ, ನೀರಿನ ವಿಚಾರದಲ್ಲಿ ಹೊಂದಾಣಿಕೆ ಇಲ್ಲ. ಮಳೆ ಇಲ್ಲದೇ ಇರೋದ್ರಿಂದ ನಮಗೆ ಸಮಸ್ಯೆ ಆಗಿದೆ. ಅವರು ಸುಪ್ರೀಂ ಕೋರ್ಟ್ಗೆ ಹೋಗಿದ್ದಾರೆ. ನಾಳೆ ಸರ್ವಪಕ್ಷಗಳ ಸಭೆ ಕರೆಯಲಾಗಿದೆ; ಅಲ್ಲಿ ಈ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ. ನೀರಿನ ಮೇಲೆ ರಾಜಕಾರಣ ಮಾಡಬಾರದು’ ಎಂದರು.

ಇದನ್ನೂ ಓದಿ; ಸರ್ವಪಕ್ಷ ಸಭೆ : ಬಿಜೆಪಿ-ಜೆಡಿಎಸ್ ನಾಯಕರಿಗೆ ಆಹ್ವಾನ ನೀಡಿದ ಸರ್ಕಾರ

‘ಅವರವರ ಆಡಳಿತ ಅವಧಿಯಲ್ಲಿ ಏನಾಗಿತ್ತು ಅಂತ ಅವರಿಗೂ ಗೊತ್ತಿದೆಯಲ್ವಾ? ಮಾಹಿತಿ ಸರಿಯಾಗಿ ಕೊಟ್ಟಿದ್ದಕ್ಕಾಗಿಯೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಮ್ಮ ಪರ ತೀರ್ಮಾನ ಮಾಡಿದ್ದು’ ಎಂದು ಬಿಜೆಪಿಯವರಿಗೆ ತಿರುಗೇಟು ಕೊಟ್ಟರು.

ರಾಜ್ಯಪಾಲರಿಗೆ ಪತ್ರ ಬರೆದ ಇಬ್ಬರು ಅಧಿಕಾರಿಗಳ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ, ‘ಇಬ್ಬರು ಅರೆಸ್ಟ್ ಆಗಿದ್ದಾರೆ ಎಂದು ನನಗೆ ಗೊತ್ತಿದೆ ಅಷ್ಟೆ; ಇದಕ್ಕೆ ಯಾರು ಕಾರಣ ಅನ್ನೋದು ಗೊತ್ತಿಲ್ಲ. ಅದರಲ್ಲಿ ಜೆಡಿಎಸ್ ನವರ ಹೆಸರಿದೆ ಅನ್ನೋದು ಗೊತ್ತಿದೆ. ಎಷ್ಟು ದಿನ ನಡೆಸ್ತಾರೋ ನಡೆಸಲಿ ನೋಡೋಣ. ದೇವರು ಅವರಿಗೆ ಒಳ್ಳೆಯದು ಮಾಡಲಿ. ಅವರಿಗೆ ಬೆಳಗ್ಗೆ ಎದ್ದು ಏನೂ ಕೆಲಸ ಇಲ್ಲ ಅಂದ್ರೆ ಇದನ್ನೇ ಮಾಡಲಿ; ಅದೇನು ಬಿಡುಗಡೆ ಮಾಡ್ತಾರೋ ಮಾಡಲಿ’ ಎಂದು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles