ವಿಜಯಪುರ: ಬಿಜೆಪಿಯಿಂದ ನನಗೆ ಯಾವುದೇ ಶೋಕಾಸ್ ನೋಟಿಸ್ ಬಂದಿಲ್ಲ. ಸುಮ್ಮನೆ ಊಹಾಪೋಹ ಹರಡಿಸಿದ್ದಾರೆ. ನೋಟಿಸ್ ನೀಡಿದ್ದರೆ ಇಷ್ಟೊತ್ತಿಗೆ ಬಂದಿರ್ತಿತ್ತು. ನಾನು ನೋಟಿಸ್ ಕೊಡುವಂತಹ ಯಾವುದೇ ಪಕ್ಷ ವಿರೋಧಿ ಹೇಳಿಕೆ ನೀಡಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಭ್ರಷ್ಟರು, ವಂಶಪಾರಂಪರ್ಯ ರಾಜಕೀಯ ಮುಂದುವರೆಸುವವರ ಬಗ್ಗೆ ಮಾತನಾಡಿದ್ದೇನೆ. ನನಗೆ ನೋಟಿಸ್ ನೀಡಿದ್ದರೆ ಇಷ್ಟೊತ್ತಿಗೆ ಬಂದಿರುತ್ತಿತ್ತು. ಯತ್ನಾಳ್ ಇಷ್ಟೆಲ್ಲ ಮಾತನಾಡಿದ್ದಾನೆ ನೋಟಿಸ್ ಯಾಕೆ ನೀಡಿಲ್ಲ ಎಂದು ಕೆಲವರಿಗೆ ಕಾಡುತ್ತಿದೆ. ಅದಕ್ಕೆ ಇಂತಹ ಊಹಾಪೋಹ ಹರಡಿಸುತ್ತಿದ್ದಾರೆ ಎಂದರು. ಇನ್ನು ಹಿಂದೆ ವಾಜಪೇಯಿ ಅವರು ಇದ್ದಾಗಲೂ ನನಗೆ ನೋಟಿಸ್ ನೀಡಿದ್ದರು. ಆದರೆ ನಾನು ಮೂರು ತಿಂಗಳಿಗೆ ಕೇಂದ್ರ ಮಂತ್ರಿಯಾದೆ. ಇದೆಲ್ಲ ರಾಜಕೀಯ ವಿರೋಧಿಗಳ ಷಡ್ಯಂತ್ರ ಅಷ್ಟೇ. ಹೈಕಮಾಂಡ್ ನೋಟಿಸ್ ಕೊಡುವ ಯಾವುದೇ ವಾತಾವರಣ ಇಲ್ಲ. ಇದು ಚುನಾವಣೆಯ ಸಮಯ. ಕೆಲ ಜನ ಆ ರೀತಿ ಭಯ ಹುಟ್ಟಿಸುವ ಕೆಲಸ ಮಾಡುತ್ತಾರೆ. ಭಯಪಡುವಂತದ್ದು, ಅಂಜುವಂತದ್ದು ಏನಿಲ್ಲ. ನಾನು ಏನೇ ಮಾತನಾಡಿದರೂ ಪಕ್ಷದ ಹಿತದೃಷ್ಟಿಯಿಂದ ಮಾತನಾಡಿದ್ದೇನೆ. 150 ಸೀಟ್ ಬರಬೇಕು ಎನ್ನುವ ಉದ್ದೇಶದಿಂದ ಮಾತನಾಡಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.