ಬೆಂಗಳೂರು: ‘ವಿಧಾನಸಭೆ ವಿಪಕ್ಷ ನಾಯಕ ಆಯ್ಕೆ ವಿಚಾರದಲ್ಲಿ ನನ್ನ ಹೆಸರೂ ಓಡ್ತಿದೆ, ಜವಾಬ್ದಾರಿ ಕೊಟ್ರೆ ನಿರ್ವಹಿಸಲು ಸಿದ್ಧ, ನನಗೆ ಪಕ್ಷ ಮುಖ್ಯ’ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ವಿಪಕ್ಷ ನಾಯಕನ ಆಯ್ಕೆಗಾಗಿ ಕೇಂದ್ರದಿಂದ ವೀಕ್ಷಕರು ಬಂದಿದ್ದಾರೆ, ಕೆಲವರನ್ನ ಅವರ ಮನೆಗೆ ಹೋಗಿ ಭೇಟಿಯಾಗಿದ್ದಾರೆ. ಸಂಜೆ 4-5 ಗಂಟೆವರೆಗೂ ಪ್ರಮುಖ ಶಾಸಕರನ್ನ ಭೇಟಿಯಾಗಿ ವೈಯಕ್ತಿಕ ಅಭಿಪ್ರಾಯ ಪಡೆಯುತ್ತಾರೆ. ನಂತರ ಶಾಸಕಾಂಗ ಪಕ್ಷದ ಸಭೆಯಲ್ಲಿ ಮತ್ತೊಮ್ಮೆ ಎಲ್ಲರ ಅಭಿಪ್ರಾಯ ಸಂಗ್ರಹಿಸುತ್ತಾರೆ. ಬಹುಶಃ ಇವತ್ತೇ ವಿಪಕ್ಷ ನಾಯಕನ ಹೆಸರು ಘೋಷಣೆ ಮಾಡಬಹುದು ಅಥವಾ ಹೈಕಮಾಂಡ್‌ಗೆ ವಿಚಾರ ತಿಳಿಸಿ ಹೇಳಬಹುದು’ ಎಂದು ಹೇಳಿದರು.
ವಿಪಕ್ಷ ನಾಯಕನ ರೇಸ್ ನಲ್ಲಿ ಆರಗ ಜ್ಞಾನೇಂದ್ರ ಹೆಸರು ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನನ್ನ ಹೆಸರೂ ಓಡ್ತಿದೆ, ನಾನಂತೂ ಕೆಲಸದಿಂದ ಹಿಂದೆ ಸರಿದಿಲ್ಲ. ಜವಾಬ್ದಾರಿ ಕೊಟ್ರೆ ಮಾಡ್ತೀನಿ, ನನಗೆ ಪಕ್ಷ ಮುಖ್ಯ. ಪಕ್ಷದ ಸಿದ್ಧಾಂತಗಳಿಗೆ ಬದ್ಧವಾಗಿದ್ದೀನಿ.. ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆದ್ದು, ಮೋದಿ ಮತ್ತೊಮ್ಮೆ ಪ್ರಧಾನಿಯಾಗ್ಬೇಕು’ ಎಂದರು.
ಇದನ್ನೂ ಓದಿ; ‘ನೀವು ಹಗಲುಕಳ್ಳರು; ನನ್ನನ್ನು ಕರೆಂಟ್ ಕಳ್ಳ ಅನ್ನೋದನ್ನ ನಿಲ್ಲಿಸಿ’
ಸ್ಪೀಕರ್ ಖಾದರ್ ಕುರಿತು ಸಚಿವ ಜಮೀರ್ ಹೇಳಿಕೆ ವಿಚಾರವಾಗಿ ಮಾತನಾಡಿ, ‘ಜಮೀರ್ ಅಹ್ಮದ್ ಹೇಳಿಕೆ ಮೂರ್ಖತನದಿಂದ ಕೂಡಿದೆ. ಬಿಜೆಪಿಯವರು ಯುಟಿ ಖಾದರ್ ಅವ್ರಿಗೆ ಕೈ ಮುಗಿಯೋ ಹಾಗೆ ಮಾಡಿದ್ದೀವಿ ಎಂದು ಹೇಳಿದ್ದಾರೆ. ಎಲ್ಲರೂ ಕೈ ಮುಗಿಯೋದು ಆ ಪೀಠಕ್ಕೆ; ಯುಟಿ ಖಾದರ್ ಮೇಲೆ ಗೌರವ ಇದೆ. ಆದರೆ, ಇದು ನೀಚ ಮನಸ್ಥಿತಿಯ ಹೇಳಿಕೆ’ ಎಂದು ಕಿಡಿಕಾರಿದರು.
‘ಜಮೀರ್ ಹೇಳಿಕೆ ಖಂಡಿಸ್ತೇನೆ, ಕಾಂಗ್ರೆಸ್ ನವರು ಕೋಮುವಾದಿಗಳು. ಇದರ ಪರಿಣಾಮ ಕಾಂಗ್ರೆಸ್ ಅನುಭಿಸುತ್ತೆ. ವೋಟ್ ಬ್ಯಾಂಕ್ ಗಾಗಿ ಏನು ಬೇಕಾದರು ಹೇಳಿಕೆ ಕೊಡ್ತಾರೆ. ಜಮೀರ್ ಅಹ್ಮದ್ ಹೇಳಿಕೆಯನ್ನ ಕಾಂಗ್ರೆಸ್ ಕೂಡ ಖಂಡಿಸಬೇಕು’ ಎಂದು ಆರಗ ಜ್ಞಾನೇಂದ್ರ ಆಗ್ರಹಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.