ಕೊಪ್ಪಳ : ಸನಾತನ ಧರ್ಮವೆಂದರೆ ಪುರಾತನ, ಶಾಶ್ವತ ಧರ್ಮವೆಂಬ ಅರ್ಥವನ್ನು ನೀಡುತ್ತದೆ. ಈ ಧರ್ಮದ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಮಾತನಾಡುತ್ತಿರುವುದು ಸರಿಯಲ್ಲ. ಯಾರೋ ಒಬ್ಬ ರಾಜಕಾರಣಿ ಸನಾತನ ಧರ್ಮ ಕುರಿತು ಮಾತನಾಡಿದ ಎಂಬ ವಿಚಾರವನ್ನೇ ದೊಡ್ಡದಾಗಿ ಎಲ್ಲೆಡೆ ವ್ಯಾಪಕವಾಗಿ ಅರ್ಥವಿಲ್ಲದ ರೀತಿಯಲ್ಲಿ ಚರ್ಚಿಸುತ್ತಿರುವುದು ಸೂಕ್ತವಲ್ಲ. ನಾನು ಯಾವ ಜಾತಿ, ಧರ್ಮಕ್ಕೆ ಸೇರಿದವನಲ್ಲ; ಮನುಷ್ಯ ಜಾತಿಗೆ ಸೇರಿದ್ದೇನೆ ಎಂದು ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಯಲಬುರ್ಗಾದಲ್ಲಿ ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯನವರ 916ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು ಜಾತಿ, ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ದೇಶ, ರಾಜ್ಯದ ಸಮಗ್ರ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಪ್ರತಿಪಾದಿಸಿದರು.
ಇದನ್ನೂ ಓದಿ : ‘ರೈತರ ಸಂಕಷ್ಟದಲ್ಲಿ ಬಿಜೆಪಿಯವ್ರು ರಾಜಕಾರಣ ಮಾಡ್ತಿದ್ದಾರೆ’
ಈ ರೀತಿಯ ಜಾತಿ ವ್ಯವಸ್ಥೆ ನಿಮೂರ್ಲನೆಗೆ ಎಲ್ಲರೂ ಕೈ ಜೋಡಿಸಬೇಕು. ಬಸವಾದಿ ಶರಣರು ಜಾತಿ ಧರ್ಮದ ಹೆಸರಿನಿಂದ ಬಂದವರಲ್ಲ. ಅವರು ತಮ್ಮ ಕಾಯಕ ವೃತ್ತಿಯ ಮುಖೇನ ಸಮಾಜದಲ್ಲಿನ ಮೌಢ್ಯ ನಿರ್ಮೂಲನೆ ಮಾಡಿ ಸಾಮಾಜಿಕ ಬದಲಾವಣೆಗೆ ಶ್ರಮಿಸಿದ್ದಾರೆ. ಬಸವಾದಿ ಶರಣರು ಜಾತ್ಯಾತೀತ ಸಮಾಜ ನಿರ್ಮಿಸಬೇಕೆಂಬ ಕನಸು ಇಟ್ಟುಕೊಂಡಿದ್ದರು ಎಂದು ಬಸವಾದಿ ಪ್ರಮಥರನ್ನು ಸ್ಮರಿಸಿದರು.
ಆದರೆ ಎಲ್ಲ ವರ್ಗದವರು ಜಾತಿ, ಧರ್ಮದ ಹೆಸರಿನಲ್ಲಿ ಶರಣರ ಜಯಂತಿಗಳನ್ನು ಮಾಡುತ್ತಿರುವುದು ಸರಿಯಲ್ಲ. ಜಾತಿ ವ್ಯವಸ್ಥೆ ನಿಮೂರ್ಲನೆಗೆ ಎಲ್ಲರೂ ಸಂಕಲ್ಪ ಮಾಡಬೇಕು. ಎಲ್ಲ ಸಮುದಾಯದವರು ಹೆಚ್ಚು ಶಿಕ್ಷಣವಂತರಾದಾಗ ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಎಲ್ಲರೂ ಶಿಕ್ಷಣ ಪಡೆಯಬೇಕು, ನಾನು ಎಲ್ಲ ಧರ್ಮಗಳನ್ನು ತುಂಬಾ ತಿಳಿದುಕೊಂಡಿದ್ದೇನೆ. ಯಾರೇ ಆದರೂ ನನ್ನನ್ನು ಅವರವರ ಧರ್ಮಗಳ ಕುರಿತು ವಿಚಾರಿಸಲಿ, ನಿರರ್ಗಳವಾಗಿ ಮಾತನಾಡುವೆ ಎಂದು ರಾಯರೆಡ್ಡಿ ಸಮಾನತೆ ಸಂದೇಶ ಸಾರಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.