ಉಡುಪಿ: ಚೈತ್ರಾ ಕುಂದಾಪುರ ಜೊತೆ ನನಗೆ ಯಾವುದೇ ರೀತಿಯ ಸಂಪರ್ಕ ಇರಲಿಲ್ಲ. ಎಲ್ಲೋ ಕಾರ್ಯಕ್ರಮಕ್ಕೆ ಬಂದಾಗ ನನ್ನ ಜೊತೆ ಫೋಟೋ ತೆಗೆಸಿಕೊಂಡಿರಬಹುದು. ಆ ರೀತಿ ನೂರಾರು ಮಂದಿ ಫೋಟೋ ತೆಗೆಸಿಕೊಳ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಬಂಧನವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚೈತ್ರಾ ಕುಂದಾಪುರ ಬಂಧನವಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ನೋಡಿದ್ದೇನೆ. ಚೈತ್ರಾ ಜೊತೆ ನನಗೆ ವೈಯಕ್ತಿಕ ಸಂಪರ್ಕ ಇರಲಿಲ್ಲ. ನನಗೆ ಚೈತ್ರಾ ಫೋನ್ ಮಾಡಿಲ್ಲ, ನಾನೂ ಅವಳಿಗೆ ಫೋನ್ ಮಾಡಿಲ್ಲ. ನಾವು ಯಾರೂ ಕೂಡ ಚೈತ್ರಾಳ ಬೆಂಬಲಕ್ಕೆ ನಿಂತಿಲ್ಲ. ನಾವು ಯಾರೂ ಅವಳ ರಕ್ಷಣೆ ಮಾಡುತ್ತಿಲ್ಲ. ಉನ್ನತ ಮಟ್ಟದ ತನಿಖೆ ಮಾಡುವಂತೆ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ನಾನು ಆಗ್ರಹಿಸುತ್ತೇನೆ. ಉಪ್ಪು ತಿಂದವರು ನೀರು ಕುಡಿಯುತ್ತಾರೆ, ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ ಎಂದರು.
ಇದನ್ನು ಓದಿ : ಚೈತ್ರಾ ಕುಂದಾಪುರ ಕುಸಿದು ಬೀಳಲು ಕಾರಣವೇನು?
ಚೈತ್ರಾ ಬಿಜೆಪಿ ಟಿಕೆಟ್ ಹೆಸರಿನಲ್ಲಿ ವಂಚಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ಯಾರಿಗೆ ಟಿಕೆಟ್ ಕೊಡಬೇಕು, ಎಲ್ಲಿ ಟಿಕೆಟ್ ಕೊಡಬೇಕು ಅನ್ನೋದನ್ನು ನಮ್ಮ ಪಕ್ಷದ ವರಿಷ್ಠರಾದ ಅಮಿತ್ ಶಾ, ಜೆ.ಪಿ ನಡ್ಡಾ ಅವರು ತೀರ್ಮಾನ ಮಾಡುತ್ತಾರೆ. ಭಾರತೀಯ ಜನತಾ ಪಾರ್ಟಿಗೆ ಗಟ್ಟಿ ಮುಟ್ಟಾದ ನೇತೃತ್ವ ಇದೆ. ಯಾರು ಕೇಳಿದ ತಕ್ಷಣ ಟಿಕೆಟ್ ಕೊಡಲು ಆಗುವುದಿಲ್ಲ ಎಂದು ಹೇಳಿದರು.
ಚೈತ್ರಾ ಕುಂದಾಪುರ ಬಿಜೆಪಿ ನಾಯಕರ ಹೆಸರನ್ನು ದುರುಪಯೋಗ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಸೂಕ್ತವಾದ ತನಿಖೆಯಾಗಬೇಕು. ಬಿಜೆಪಿಯಲ್ಲಿ ದುಡ್ಡು ತೆಗೆದುಕೊಂಡು ಟಿಕೆಟ್ ಕೊಡುವ ಪರಿಪಾಠವಿಲ್ಲ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.