ಬೆಂಗಳೂರು: ಚಂದ್ರಯಾನ-3 ಕುರಿತು ಟೀ ಮಾರುವ ವ್ಯಕ್ತಿಯ ವ್ಯಂಗ್ಯಚಿತ್ರ ಶೇರ್ ಮಾಡಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್ ವಿರುದ್ಧ ಬಿಜೆಪಿ ಮುಖಂಡ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಅವರು, ‘ನಾನು ಕೂಡ ಕಾರ್ಟೂನ್ ನೋಡಿದ್ದೇನೆ; ಪ್ರಕಾಶ್ ರೈ ಒಬ್ಬ ವಿಕೃತ ಮನುಷ್ಯ. ಟೀ ಮಾರುವ ಚಿತ್ರದ ಮೂಲಕ ವಿಜ್ಞಾನಿಗಳನ್ನು ಟೀಕೆ ಮಾಡುವುದನ್ನು ನೋಡಿದ್ರೆ ಇದು ಕೀಳು ಪ್ರವೃತ್ತಿ ಅನ್ಸುತ್ತೆ’ ಎಂದರು.
‘ನಾನು ಸಾಕಷ್ಟು ಕಲಾವಿದರನ್ನು ನೋಡಿದ್ದೇನೆ; ಈತನೂ ಸಹ ಕಲಾವಿದ. ಆದರೆ, ಡಾ.ರಾಜಕುಮಾರ್ ಹಾಗೂ ರಜನಿಕಾಂತ್ ಅವ್ರೆಲ್ಲಾ ಉತ್ತಮ ಕಲಾವಿದರು. ಇವರನ್ನು ಕಲಾವಿದ ಅಂತ ಕರೆಯೋಕೆ ಆಗಲ್ಲ; ಸಿನೆಮಾ ರೀತಿಯಲ್ಲೇ ನಿಜ ಜೀವನದಲ್ಲೂ ಪ್ರಕಾಶ್ ರಾಜ್ ವಿಲನ್ ಆಗಿದ್ದಾನೆ’ ಎಂದು ಏಕವಚನದಲ್ಲೇ ಕಿಡಿಕಾರಿದರು.
‘ನಮ್ಮ ಇಸ್ರೋ ವಿಜ್ಞಾನಿಗಳ ಪರಿಶ್ರಮದಿಂದ ಚಂದ್ರಯಾನ-3 ಲ್ಯಾಂಡ್ ಆಗ್ತಿದೆ. ವಿಜ್ಞಾನಿಗಳು ಆರಂಭದಲ್ಲಿ ತಿರುಪತಿ ಹಾಗೂ ನಿನ್ನೆ ಕಟೀಲ್ ದುರ್ಗಾಪರಮೇಶ್ವರಿ ಆಶೀರ್ವಾದ ಪಡೆದಿದ್ದಾರೆ. ಭಗವಂತನ ಇಚ್ಚೆ ಇದೆ, ಚಂದ್ರಯಾನ 3ರ ಲ್ಯಾಂಡಿಂಗ್‌ಗೆ ಶುಭ ಕೊರುತ್ತೇನೆ’ ಎಂದು ಆರ್. ಅಶೋಕ್ ಹೇಳಿದರು.
ಇದನ್ನೂ ಓದಿ; ‘ದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುತ್ತದೆ; ಟ್ರೋಲಿಗರ ಕಣ್ಣಿಗೆ ಕಾಣಿಸಿದ ಚಾಯ್‌ವಾಲಾ ಯಾರು?’
ಸ್ಟಾಲಿನ್ ಜತೆ ಕಾಂಗ್ರೆಸ್ ಒಪ್ಪಂದ
‘ಕೊನೆಗೂ ಸರ್ವಪಕ್ಷ ಸಭೆ ಕರೆದಿದ್ದಾರೆ; ಸ್ಟಾಲಿನ್ ಜತೆ ಕಾಂಗ್ರೆಸ್ ಒಳ ಒಪ್ಪಂದ ಇದು. ನೀರು ಬಿಟ್ಟ ಮೇಲೆ ಸಭೆ ಕರೆದಿದ್ದಾರೆ’ ಎಂದು ಆರ್. ಅಶೋಕ್ ಲೇವಡಿ ಮಾಡಿದರು.
‘ಡಿಎಂಕೆ ಜತೆಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ; ಮೇಕೆದಾಟು ಅಂದ್ರು, ಈಗ ಮೇಕೆನೂ ಇಲ್ಲ, ದಾಟು ಇಲ್ಲ. ಅಧಿಕಾರ ಬಂದ ಮೇಲೆ ಕಾವೇರಿನೂ ಇಲ್ಲ ಮೇಕೆದಾಟು ಇಲ್ಲ. ನೀರು ಬಿಟ್ಟು ಕರ್ನಾಟಕದ ರೈತರಿಗೆ ಸರ್ಕಾರ ಅನ್ಯಾಯ ಮಾಡಿದೆ’ ಎಂದು ಕಿಡಿಕಾರಿದರು.
ವಲಸೆ ಶಾಸಕರು ಪಕ್ಷ ತೊರೆಯುವ ಊಹಾಪೋಹದ ಬಗ್ಗೆ ಮಾತನಾಡಿ, ‘ಸೋಮಶೇಖರ್ ಜೊತೆಗೆ ಮೊನ್ನೆಯಿಂದ ಮಾತನಾಡುತ್ತಿದ್ದೇನೆ. ಅವರು ಮಂತ್ರಿಯಾಗಿ ಅಧಿಕಾರ ಅನುಭಸಿದ್ದಾರೆ. ಹೆಬ್ಬಾರ್ ಹಾಗೂ ಸೋಮಶೇಖರ್ ಹೋಗಲ್ಲ ಅಂತ ಹೇಳಿದ್ದಾರೆ; ಯಾರು ಸಹ ಪಕ್ಷ ಬಿಟ್ಟು ಹೊಗಲ್ಲ’ ಎಂದು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.