ಬೆಂಗಳೂರು : ‘ಆಪರೇಷನ್ ಆಗೋಕೆ ನನಗೆ ಕ್ಯಾನ್ಸರ್ ಆಗಿಲ್ಲ, ಗಡ್ಡೆನೂ ಆಗಿಲ್ಲ’ ಎಂದು ಸುರಪುರದ ಮಾಜಿ ಶಾಸಕ ರಾಜುಗೌಡ ಹೇಳಿದರು.
ನಟ ಸುದೀಪ್ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಜೊತೆ ರಾಜುಗೌಡ ಆತ್ಮೀಯವಾಗಿ ಕಾಣಿಸಿಕೊಂಡಿರುವುದು ಆಪರೇಷನ್ ಹಸ್ತದ ಗುಮಾನಿ ಎಬ್ಬಿಸಿದೆ. ಈ ಕುರಿತು ಅವರು ಪ್ರತಿಕ್ರಿಯೆ ನೀಡಿದರು.
ನಿನ್ನೆ ಸುದೀಪ್ ಅಣ್ಣನ ಹುಟ್ಟು ಹಬ್ಬದ ಪ್ರಯುಕ್ತ ಜೆಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್‌ನಲ್ಲಿ ಪಾರ್ಟಿ ಇತ್ತು. ಬಿ.ಸಿ ಪಾಟೀಲ್, ಡಿಕೆಶಿ ಅಣ್ಣಾ ಬಂದಿದ್ರು. ಫಿಲ್ಮ್ ಪ್ರೊಡ್ಯೂಸರ್, ನಟರು ಎಲ್ಲರೂ ಇದ್ರು. ಡಿಕೆಶಿ ರಿಸಲ್ಟ್ ಬಗ್ಗೆ ಕೇಳಿದ್ರು ಅಷ್ಟೇ. ನಾವು ಮೊದಲಿನಿಂದಲೂ ಆತ್ಮೀಯರು. ಬೆಳಗ್ಗೆ ಎದ್ದು ನೋಡಿದ್ರೆ ಸುದೀಪ್ ಅವರ ಹುಟ್ಟು ಹಬ್ಬಕ್ಕಿಂತ ನಮ್ಮ ಬಗ್ಗೆಯೇ ಹೆಚ್ಚು ಸುದ್ದಿಯಾಗಿದೆ. ಆಪರೇಷನ್ ಹಸ್ತ ಎನ್ನುವ ವಿಚಾರವೇ ಹೆಚ್ಚಿದೆ. ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಪಕ್ಷದಲ್ಲಿ ಉತ್ತಮ ಸ್ಥಾನಮಾನ ನೀಡಿದ್ದಾರೆ. ಚುನಾವಣೆ ಅಂದ ಮೇಲೆ ಸೋಲು, ಗೆಲುವು ಇದ್ದಿದ್ದೆ ಎಂದು ಹೇಳಿದರು.


ನನಗೆ ಕಾಂಗ್ರೆಸ್ ನಿಂದ ಆಹ್ವಾನ ಬಂದಿಲ್ಲ. ‘ರಾಜು ಚೆನ್ನಾಗಿ ಕೆಲಸ ಮಾಡಿದ್ರು ಹೇಗೆ ಸೋತೆ’ ಎಂದು ಡಿಕೆಶಿ ಅಣ್ಣ ಕೇಳಿದ್ರು. ನಿಮ್ಮ ಮತ್ತು ಸಿದ್ದರಾಮಯ್ಯ ಅವರ ಪ್ರಭಾವ ಅಂತ ಹೇಳಿದೆ. ಈಗ ಕಾಂಗ್ರೆಸ್ ಗೆ ಬರುವ ಪ್ರಶ್ನೆಯೇ ಇಲ್ಲ. ಗೆದ್ದವರು ಗೆಲುವಿನ ಮಜಾ ಪಡೀತಿದ್ದಾರೆ. ನಾವು ಸೋತ ಮಜಾ ಪಡೀತಿದ್ದೇವೆ. ಗೆಲುವಿನ ಮಜವೇ ಯಾವಾಗಲೂ ಇರಬಾರದು ಎಂದು ಹೇಳಿದ್ದೇನೆ ಎಂದರು.
ಬಿಜೆಪಿಯಲ್ಲಿ ಬೇಸರ ಇರೋದು ಸತ್ಯ. ಚರ್ಚೆ ವೇಳೆ ವಿಪಕ್ಷ ನಾಯಕ ಆಗಬೇಕು ಅಂತ ಹೇಳಿದ್ದೇವೆ. ಬೇಗ ಮಾಡಿದರೆ ನಮಗೂ ಅನುಕೂಲ ಆಗಲಿದೆ. ಪಕ್ಷದ ವೇದಿಕೆಯಲ್ಲಿ ಮಾತನಾಡಿದ್ದೇನೆ. ವಿಪಕ್ಷ ಹಾಗೂ ರಾಜ್ಯಾಧ್ಯಕ್ಷ ಸ್ಥಾನ ಶೀಘ್ರವೇ ತುಂಬಬೇಕಿದೆ. ವಿಪಕ್ಷ ನಾಯಕನ ಜೊತೆ ವಿಪ್ ಕೂಡ ಬರಲಿದ್ದಾರೆ. ನಾಲ್ಕೈದು ಹುದ್ದೆ ಕೂಡ ಜೊತೆಯಲ್ಲೇ ಬರಲಿದೆ. ಬೇಗನೇ ನೇಮಕ ಮಾಡ್ತಾರೆ ಎಂದು ಹೇಳಿದರು.
ಬೇರೆ ಪಕ್ಷಗಳಿಂದ ಬಿಜೆಪಿಗೆ ಬಂದಿರುವ ಹದಿನೇಳು ಮಂದಿ ಶಾಸಕರನ್ನು ಬಾಂಬೆ ಟೀಂ ಅನ್ನೋದು ಸರಿಯಲ್ಲ. ಅವರು ಬರದೇ ಇದ್ದಿದ್ದರೆ ನಾವು ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.