ಬೆಂಗಳೂರು : ರೈತರ ಆತ್ಮಹತ್ಯೆಗಳ ಕುರಿತು ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ಬಿಜೆಪಿ ನಾಯಕರಿಂದ ಖಂಡನೆ ವಿಚಾರಕ್ಕೆ ಸ್ವತಃ ಸಕ್ಕರೆ ಸಚಿವರೇ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ನಾನು ಏನು ಹೇಳಿಕೆ ಕೊಟ್ಟಿದೀನಿ? ಮಾಧ್ಯಮಗಳಲ್ಲಿ ಏನು ಬಂದಿದೆ. ಮೇಲಿಂದ ಮೇಲೆ ನನ್ನ ಹೇಳಿಕೆ ಬಗ್ಗೆ ತಪ್ಪು ವರದಿಗಳಾಗಿದೆ. ಮಾಧ್ಯಮಗಳಲ್ಲಿ ಹದಿನೆಂಟು ರೈತರ ಆತ್ಮಹತ್ಯೆ ಆಗಿದೆ ಎಂದು ವರದಿ ಮಾಡಿದ್ದವು. ನಾವು ತನಿಖೆ ಮಾಡಿದಾಗ ಆರು ಜನ ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ.
ಸಾಲ ಅಥವಾ ವ್ಯವಸಾಯದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರೆ ಖಂಡಿತ ಅವರಿಗೆ ಪರಿಹಾರ ಕೊಡೋಣ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಡಿಎಂಕೆ ಅಂದ್ರೆ ಡೆಂಗ್ಯೂ, ಮಲೇರಿಯಾ, ಸೊಳ್ಳೆ; ಅಣ್ಣಾಮಲೈ ವ್ಯಂಗ್ಯ
ನನ್ನ ಹೇಳಿಕೆ ಬಗ್ಗೆ ವಿಜಯೇಂದ್ರ, ಆ ಮಂತ್ರಿಗೆ ಮದ ಬಂದಿದೆ ಎಂದು ಹೇಳುತ್ತಾರೆ. ವಿಜಯೇಂದ್ರಗೆ ಹೇಳಲು ಬಯಸುತ್ತೇನೆ, ನಾನು ಎಂಟು ಸಿಎಂಗಳ ಜತೆ ಕೆಲಸ ಮಾಡಿದ್ದೇನೆ. ತಂದೆ ಜತೆಗೂ ಕೆಲಸ ಮಾಡಿರುವೆ. ಅವರ ಪಕ್ಷದಲ್ಲೂ ಕೆಲಸ ಮಾಡಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅವರು ನನ್ನ ಬಗ್ಗೆ ವಿಚಾರ ಮಾಡಿ ಮಾತನಾಡಲಿ ಈಗ ಮೊದಲ ಬಾರಿಗೆ ವಿಜಯೇಂದ್ರ ಶಾಸಕರಾಗಿದ್ದಾರೆ ಇಂಥ ಪದಗಳನ್ನು ಬಳಸುವುದು ಸರಿಯಲ್ಲ ಎಂದು ಕಿಡಿ ಕಾರಿದ್ದಾರೆ. ಮದ ಬಂದಿದೆ ಎಂಬ ಪದಬಳಕೆ ಮಾಡಿರುವ ವಿಜಯೇಂದ್ರ ನನ್ನ ಕ್ಷಮೆ ಕೇಳಲಿ ಎಂದು ಒತ್ತಾಯಿಸಿದ್ದಾರೆ. ಆ ನಂತರ ನಾನು ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಆ ಮಂತ್ರಿಯನ್ನು ಹುಚ್ಚಾಸ್ಪತ್ರೆಗೆ ಸೇರಿಸಲಿ ಅಂತ ಶ್ರೀರಾಮುಲು ಹೇಳಿದ್ದಾರೆ. ಅವರೂ ಸಹ ನನ್ನ ಜತೆ ಧಾರವಾಡ ಹುಚ್ಚಾಸ್ಪತ್ರೆಗೆ ಬರಲಿ, ಯಾರಿಗೆ ಹುಚ್ಚಿದೆ ಅಂತ ಗೊತ್ತಾಗುತ್ತದೆ. ಈ ರೀತಿ ಮಾತನಾಡೋದು ಯೋಗ್ಯವಲ್ಲ ಎಂದು ಸಚಿವ ಪಾಟೀಲ್ ಗರಂ ಆಗಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಡೆಂಘೀ ಪ್ರಕರಣ ದಿಡೀರ್ ಹೆಚ್ಚಳ: 7 ಮಂದಿ ಸಾವು!
ಆತ್ಮಹತ್ಯೆ ಬಗ್ಗೆ ಪ್ರಾಥಮಿಕ ವರದಿ ಮಾತ್ರ ಕೊಟ್ಟರೆ ಅದು ಆತ್ಮಹತ್ಯೆ ಆಗುವುದಿಲ್ಲ. ತನಿಖೆಯಾಗಿ ಎಫ್ಎಸ್ಎಲ್ ರಿಪೋರ್ಟ್ ಬಂದರೆ ಮಾತ್ರ ಅದು ಆತ್ಮಹತ್ಯೆ ಎಂದು ಖಚಿತವಾಗುತ್ತದೆ. ಆ ರೀತಿ ತನಿಖೆ ಮಾಡಿಸಿದಾಗ ಆರು ಆತ್ಮಹತ್ಯೆ ಪ್ರಕರಣಗಳು ಹಾವೇರಿ ಜಿಲ್ಲೆಯಲ್ಲಾಗಿವೆ. ಇದು ಹದಿನೆಂಟು ಎಂದು ತಪ್ಪಾಗಿ ವರದಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ರೈತರು ಅಕಸ್ಮಾತ್ ಸಾಲ ಮಾಡಿ, ಬೆಳೆ ಹಾನಿಯಾಗಿ ಆತ್ಮಹತ್ಯೆ ಮಾಡಿಕೊಂಡರೆ ಅವರಿಗೆ ಐದು ಲಕ್ಷ ಅಲ್ಲ ಇನ್ನೂ ಹೆಚ್ಚು ಪರಿಹಾರ ಕೊಟ್ಟರೂ ಸಂತೋಷವಾಗುತ್ತದೆ ಎಂದು ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ.
ಪರಿಹಾರದ ಆಸೆಗಾಗಿ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ನನ್ನನ್ನು ನಾನು ಹೋಲಿಸಿಕೊಂಡು ಮಾತನಾಡಿದ್ದೆ, ನಾನು ಅಂತ ಹೇಳಿದ್ದೆ, ರೈತ ಅಂತ ಹೇಳಿರಲಿಲ್ಲ ಎಂದು ಶಿವಾನಂದ ಪಾಟೀಲ್ ಹೇಳಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.