ಉಡುಪಿ : ‘ನನಗೆ ಯಾವುದೇ ಕರೆ ಬಂದಿಲ್ಲ’ ಎಂದು ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಹೇಳಿದರು. ಅಮಿತ್ ಶಾ ಕರೆ ಮಾಡಿ ಮಾತನಾಡಿದ್ದಾರೆ ಎಂಬ ವಿಚಾರದ ಬಗ್ಗೆ ಅವರು ಪ್ರತಿಕ್ರಿಯಿಸಿದರು.
ಉಡುಪಿಯಲ್ಲಿ ಮಾತನಾಡಿದ ಶೆಟ್ಟರ್, ನಾನು ಈಗ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಕಾಂಗ್ರೆಸ್ ನನ್ನನ್ನು ಗೌರವಯುತವಾಗಿ ನಡೆಸಿಕೊಳ್ತಿದೆ. ಪರಿಷತ್ ಸದಸ್ಯನಾಗಿ ಮಾಡಿದೆ. ಬಿಜೆಪಿ ಹೈಕಮಾಂಡ್ ನಿಂದ ನನಗೆ ಯಾವುದೇ ಕರೆ ಬಂದಿಲ್ಲ. ಡೆಲ್ಲಿ ನಾಯಕರ ತಲೆಯಲ್ಲಿ ಏನಿದೆಯೋ ನನಗೆ ಗೊತ್ತಿಲ್ಲ ಎಂದರು.
ಆಪರೇಷನ್ ಹಸ್ತದ ಬಗ್ಗೆ ಪ್ರತಿಕ್ರಿಯಿಸಿದ ಶೆಟ್ಟರ್, ಕಾಂಗ್ರೆಸ್ ಬಹುಮತದಿಂದ ಗೆದ್ದು ಸರ್ಕಾರ ರಚಿಸಿದೆ. ಹಾಗಾಗಿ, ಆಪರೇಷನ್ ಮಾಡುವ ಅವಶ್ಯಕತೆ ಇಲ್ಲ. ಯಾರಾದರು ಸ್ವಇಚ್ಛೆಯಿಂದ ಪಕ್ಷಕ್ಕೆ ಬಂದರೆ ಅದು ಆಪರೇಷನ್ ಆಗುವುದಿಲ್ಲ. ನಾವಾಗಿ ಬಲವಂತದಿಂದ ಕರೆದುಕೊಂಡು ಬಂದರೆ ಮಾತ್ರ ಆಪರೇಷನ್ ಆಗಲಿದೆ. ಕಾಂಗ್ರೆಸ್ ಯಾವುದೇ ಆಪರೇಷನ್ ಮಾಡ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ಜಗದೀಶ್ ಶೆಟ್ಟರ್‌ಗೆ ಅಮಿತ್ ಶಾ ದೂರವಾಣಿ ಕರೆ; ಮತ್ತೆ ಬಿಜೆಪಿ ಸೇರ್ತಾರಾ ಮಾಜಿ ಸಿಎಂ?
ಬಿಜೆಪಿ ನಾಯಕರ ಕಾಂಗ್ರೆಸ್ ಸೇರ್ಪಡೆ ವಿಚಾರ ಪ್ರಸ್ತಾಪಿಸಿದ ಶೆಟ್ಟರ್, ಬಿಜೆಪಿ-ಜೆಡಿಎಸ್ ನಲ್ಲಿ ನೊಂದಿರುವ ಅನೇಕ ಮಂದಿ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಕಾರ್ಯಕರ್ತರಿಗೆ ಅಲ್ಲಿ ಅನಾಥ ಭಾವ ಕಾಡ್ತಿದೆ. ಅನೇಕ ಮಂದಿ ನನಗೆ ಕರೆ ಮಾಡಿ ಸಲಹೆ ಕೇಳ್ತಿದ್ದಾರೆ. ಅಷ್ಟರ ಮಟ್ಟಿಗೆ ಅಲ್ಲಿ ನಾಯಕತ್ವದ ಕೊರತೆ ಇದೆ ಎಂದರು.
ಬಿಜೆಪಿ ಪರಿಸ್ಥಿತಿ ಶೋಚನೀಯವಾಗಿದೆ. ಒಂದು ರಾಷ್ಟ್ರೀಯ ಪಕ್ಷಕ್ಕೆ ಇದುವರೆಗೆ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಈ ಹಿಂದೆ 120 ಸ್ಥಾನ ಪಡೆದಿದ್ದ ಪಕ್ಷ ಈಗ ಹೀನಾಯ ಪರಿಸ್ಥಿತಿಗೆ ತಲುಪಿದೆ. ರಾಜ್ಯ ಬಿಜೆಪಿಯ ಕೆಲ ನಾಯಕರಿಂದ ಪಕ್ಷ ಹೀಗಾಗಿದೆ, ನಮ್ಮಂತ ನಾಯಕರಿಗೆ ಆ ಪಕ್ಷದಲ್ಲಿ ಗೌರವ ಇಲ್ಲ ಎಂದು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.