ಮಂಗಳೂರು: ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಗೆ 7 ಕೋಟಿ ರೂ. ವಂಚನೆ ಎಸಗಿರುವ ಆರೋಪ ಸಂಬಂಧ ಚೈತ್ರಾ ಕುಂದಾಪುರ ಸೇರಿದಂತೆ ಇಬ್ಬರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಈ ಪ್ರಕರಣ ರಾಜಕೀಯವಾಗಿಯೂ ಭಾರೀ ಚರ್ಚೆಗೆ ಕಾರಣವಾಗಿದೆ. ಚೈತ್ರಾ ಕುಂದಾಪುರ ಬಂಧನಕ್ಕೂ ಮುನ್ನ ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಂ ಮನೆಯಲ್ಲಿ ಅವಿತುಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾನು ಚೈತ್ರಾ ಕುಂದಾಪುರ ಅವರಿಗೆ ಆಶ್ರಯ ನೀಡಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಾನು ಆಶ್ರಯ ನೀಡಿದ್ದರೆ ಪೊಲೀಸರು ವಿಚಾರಣೆಗೆ ಕರೆಯಬೇಕಿತ್ತಲ್ಲವೇ ? ಸಿಸಿಬಿ ಪೊಲೀಸರಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ. ಚೈತ್ರಾ ಕುಂದಾಪುರ ಭೇಟಿಯಾಗಿ ಒಂದು ವರ್ಷ ಆಗಿದೆ. ಐದು ವರ್ಷದ ಹಿಂದಿನ ಫೋಟೋವನ್ನು ವೈರಲ್ ಮಾಡುತ್ತಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ‘ರೈತರ ಹಿತಕ್ಕಾಗಿ ಕಾವೇರಿ ನೀರು ನಿಯಂತ್ರಣ ಸಮಿತಿ ತೀರ್ಮಾನ ಖಂಡಿಸ್ತೀವಿ’
ಅಂಜುಂ ಹಾಗೂ ಚೈತ್ರಾ ಸೋಷಿಯಲ್ ಮೀಡಿಯಾದಲ್ಲಿ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿರುತ್ತಾರೆ, ಅದರೆ ಅವರಿಬ್ಬರು ಸ್ನೇಹಿತರು ಎನ್ನಲಾಗಿತ್ತು. ಆದರೆ ಆಕೆಗೆ ನಾನು ಆಶ್ರಯ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಏನಿದು ಪ್ರಕರಣ?: ಚೈತ್ರಾ ಕುಂದಾಪುರ ಅವರು ಉದ್ಯಮಿಯೊಬ್ಬರಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ವಂಚಿಸಿರುವ ಆರೋಪದ ಮೇಲೆ ಪೊಲೀಸರು ಉಡುಪಿಯಲ್ಲಿ ವಶಕ್ಕೆ ಪಡೆದು ಸದ್ಯ ಬೆಂಗಳೂರಿಗೆ ಕರೆತಂದಿದ್ದಾರೆ.
ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರು ಈ ಬಾರಿಯ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರ ಮುಗ್ಧತೆಯನ್ನು ಬಳಸಿಕೊಂಡಿದ್ದ ಚೈತ್ರಾ, ನಾಲ್ಕೈದು ಜನರ ತಂಡದ ಮೂಲಕ ನಕಲಿ ಆರೆಸ್ಸೆಸ್ ನಾಯಕರನ್ನು ಸೃಷ್ಟಿಸಿ, ಟಿಕೆಟ್ ಕೊಡಿಸುವುದಾಗಿ ನಂಬಿಸಿ ಮೂರು ಹಂತಗಳಲ್ಲಿ ಬರೋಬ್ಬರಿ ಏಳು ಕೋಟಿ ರೂಪಾಯಿ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.