ಬೆಂಗಳೂರು : ‘ನನ್ನ ಹೇಳಿಕೆಗೆ ಈಗಲೂ ಬದ್ಧ, ಯಾರು ಏನು ಮಾಡಿದರೂ ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆ ಬೆಂಬಲಿಸಿದ್ದಕ್ಕೆ ಪ್ರಿಯಾಂಕ್ ಖರ್ಗೆ ವಿರುದ್ಧ ಉತ್ತರ ಪ್ರದೇಶದ ರಾಂಪುರದಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಂವಿಧಾನವೇ ನನ್ನ ಧರ್ಮ. ನನ್ನ ಹೇಳಿಕೆ ಅತ್ಯಂತ ಸ್ಪಷ್ಟವಾಗಿದೆ. ನಾನು ಯಾವುದೇ ಒಂದು ಧರ್ಮದ ವಿರುದ್ಧ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ.’ಯಾವ ಧರ್ಮ ಮನುಷ್ಯರ ಮಧ್ಯೆ ಬೇಧ ಭಾವ ಮೂಡಿಸುತ್ತದೆಯೋ, ಅದು ಧರ್ಮವೇ ಅಲ್ಲ’. ಅವರಿಗೆ ಅವರ ಧರ್ಮ ಆ ರೀತಿಯಾಗಿದೆ ಎನಿಸಿದರೆ. ಅದು ಅವರ ಧರ್ಮದ ಸಮಸ್ಯೆ ಎಂದರು.
ಇದು ನೋಡಿ : ‘ಸನಾತನ’ ವಿವಾದ : ಪ್ರಿಯಾಂಕ್ ಖರ್ಗೆ, ಉದಯನಿಧಿ ವಿರುದ್ಧ ಎಫ್ಐಆರ್
ಉತ್ತರ ಪ್ರದೇಶ ಸರ್ಕಾರ ಏನಾದರೂ ಮಾಡಿಕೊಳ್ಳಲಿ. ಕಾನೂನು ಪ್ರಕಿಯೆ ಕ್ರಮ ಬದ್ಧವಾಗಿ ನಡೆಯುತ್ತದೆ. ನಾವು ಸಂವಿಧಾನ ಬದ್ಧವಾಗಿ ಅದನ್ನು ಎದುರಿಸಲು ಏನು ಮಾಡಬೇಕೋ ಅದು ಮಾಡುತ್ತೇವೆ ಎಂದು ಹೇಳಿದರು.
ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದ ಮೇಲೆ ಉದಯನಿಧಿ ಸ್ಟಾಲಿನ್ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಉತ್ತರ ಪ್ರದೇಶದ ರಾಂಪುರದ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ವಕೀಲರಾದ ಹರ್ಷ ಗುಪ್ತ ಮತ್ತು ರಾಮ್ ಸಿಂಗ್ ಲೋಧಿ ಎಂಬವರ ದೂರು ಆಧರಿಸಿ ಐಪಿಸಿ ಸೆಕ್ಷನ್ 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಮತ್ತು 153 ಎ (ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.