ಬೆಂಗಳೂರು: ಸಂಪುಟ ಸೇರ್ಪಡೆ ಭರವಸೆ ಸಿಕ್ಕಿದ್ದು, ಹಾಗಾಗಿ ಸಿಎಂ ಬೊಮ್ಮಾಯಿಗೆ ಥ್ಯಾಂಕ್ಸ್ ಹೇಳ್ತಾ ಸದ್ಯಕ್ಕೆ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ನಾಯಕರ ಮುಂದಿನ ಕ್ರಮಕ್ಕೆ ಕಾಯುವೆ. ಆ ನಂತರವಷ್ಟೇ ನನ್ನ ನಿರ್ಧಾರ ಹೊರಬೀಳಲಿದೆ ಎಂದರು.
ನನ್ನ ಮೇಲೆಯೂ ಆರೋಪ ಬಂದಾಗ ನಾನು ರಾಜೀನಾಮೆ ಕೊಟ್ಟೆ. ನನ್ನ ಮೇಲೆ ಆರೋಪ ನಿರಾಧಾರ ಅಂತ ತನಿಖೆಯಲ್ಲಿ ಗೊತ್ತಾಯ್ತು. ಕ್ಲೀನ್ ಚಿಟ್ ಬಂದು ನಾಲ್ಕು ತಿಂಗಳಾಯ್ತು. ಆದರೂ ನಾನು ರಾಜ್ಯದ ಯಾವುದೇ ನಾಯಕರಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ ಎಂದರು.”ರಮೇಶ್ ಜಾರಕಿಹೊಳಿ ವಿಚಾರವೇ ಬೇರೆ, ನನ್ನ ವಿಚಾರವೇ ಬೇರೆ. ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ನಾನು ಅಮಿತ್ ಶಾ, ನರೇಂದ್ರ ಮೋದಿ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ” ಎಂದರು.
“ಬಸವರಾಜ ಬೊಮ್ಮಾಯಿ ಅವರನ್ನು ಕೇಳಿದ್ದಾಗ ಸಂಪುಟಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ ತೆಗೆದುಕೊಂಡಿಲ್ಲ. ನಾನು ಅವರ ಬಗ್ಗೆ ಆರೋಪ ಮಾಡಲು ಹೋಗುವುದಿಲ್ಲ. ಸಂಪುಟ ವಿಸ್ತರಣೆ ಬಗ್ಗೆ ಯಾರು ತೀರ್ಮಾನ ಕೈಗೊಳ್ಳಬೇಕೋ ಅವರು ಕೈಗೊಳ್ಳಲಿ” ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು. ಸಚಿವ ಸ್ಥಾನ ವಿಚಾರವಾಗಿ ಸಿಎಂ ಬೊಮ್ಮಾಯಿ ಉತ್ತರಿಸಬೇಕು ಎಂದು ಈಶ್ವರಪ್ಪ ಹೇಳಿದ್ದರು ಅದೇ ಹಿನ್ನೆಲೆ ರಮೇಶ್ ಜಾರಕಿಹೊಳಿ, ಕೆ ಎಸ್ ಈಶ್ವರಪ್ಪ ರಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ದೆಹಲಿ ಭೇಟಿ ಸಂಧರ್ಭದಲ್ಲಿ ಪ್ರಸ್ತಾಪ ಮಾಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು.
ಕೆ ಎಸ್ ಈಶ್ವರಪ್ಪರನ್ನು ಮರುಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಪಕ್ಷದ ಹೈಕಮಾಂಡ್ ಜೊತೆ ಮಾತನಾಡಿರುವೆ. ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳುವ ಬಗ್ಗೆ ನಮ್ಮ ಕೇಂದ್ರ ನಾಯಕರು ಭರವಸೆ ನೀಡಿದ್ದಾರೆ. ಹಾಗಾಗಿ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವ ಸಂಭವವಿದೆ ಎಂದು ತಿಳಿಸಿದ್ದರು. ಈ ವಿಚಾರವಾಗಿ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.