ಬೆಂಗಳೂರು : ಇನ್ಮುಂದೆ ನನ್ನನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟವಾಗಿ ಸಿಎಂ ಗೆ ತಿಳಿಸಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ರಾಜಕಾರಣದಲ್ಲಿ ಏನೇನು ಆಗುತ್ತದೆ ಅಂತಾ ಯಾರಿಗೂ ಗೊತ್ತಾಗಲ್ಲ, ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಳ್ಳುತ್ತಾನೆ ಅಂತಾ ಕನಸು ಬಿದ್ದಿತ್ತಾ? ಅವರು ಮಲಗಿದ್ದು ಒಂದು ಕಡೆ ಪತ್ರ ಸಿಕ್ಕಿದ್ದು ಮತ್ತೊಂದು ಕಡೆ ಆದರೂ ಈ ಪ್ರಕರಣದಲ್ಲಿ ನನ್ನ ಮೇಲೆ ಆರೋಪ ಬಂತು, ನಂತರ ಸಚಿವ ಸ್ಥಾನಕ್ಕೆ ನಾನು ರಾಜೀನಾಮೆಯನ್ನೂ ನೀಡಬೇಕಾಯಿತು ಎಂದರು.
ಪಕ್ಷ ಮತ್ತು ಸರ್ಕಾರಕ್ಕೆ ಸಮಸ್ಯೆ ಮಾಡಲು ನಾನು ತಯಾರಿಲ್ಲ, ಮಂತ್ರಿ ಮಾಡುವ ಅವಶ್ಯಕತೆ ಇಲ್ಲ ಎಂದು ಕೂಡಾ ಸಿಎಂಗೆ ತಿಳಿಸಿ ಬಂದಿದ್ದೇನೆ. ನನ್ನ ಇನ್ನು ಮಂತ್ರಿ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದೇನೆ, ಕೆಲಸ ಮಾಡಲು ಮಂತ್ರಿಯೇ ಆಗಬೇಕು ಅಂತಾ ಏನೂ ಇಲ್ಲ ಅನೇಕ ಇಲಾಖೆ ನಾನು ನೋಡಿದ್ದೇನೆ ಎಂದು ನುಡಿದರು.
ಕರ್ನಾಟಕದಲ್ಲಿನ ಚುನಾವಣೆಗೆ ಗುಜರಾತ್ ಮಾಡೆಲ್ ಬಳಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಗುಜರಾತ್ ನಲ್ಲಿ ಗೆದ್ದ ಮೇಲೆ ತಾನೇ ಗೊತ್ತಾಗಿದ್ದು ಗುಜರಾತ್ ಮಾಡೆಲ್ ಏನು ಅಂತಾ, ಕರ್ನಾಟಕದಲ್ಲಿ ಗೆದ್ದ ಮೇಲೆ ಕರ್ನಾಟಕದ ಮಾಡೆಲ್ ಏನು ಅಂತಾ ಗೊತ್ತಾಗುತ್ತದೆ ನಂತರ ಬೇರೆ ರಾಜ್ಯಗಳು ಅನುಸರಿಸುವ ಕೆಲಸ ಆಗಬಹುದು ಕರ್ನಾಟಕಕ್ಕೆ ಕರ್ನಾಟಕ ಮಾಡೆಲ್ ಎಂದರು.