ಮೊಳಕಾಲ್ಮುರು: ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದು, ಕೆಲ ಕಾರ್ಯಗಳು ಬಾಕಿ ಉಳಿದಿವೆ. ಅವುಗಳನ್ನು ಪೂರ್ಣಗೊಳಿಸಲು ಇನ್ನೊಂದು ಅವಕಾಶ ನೀಡಬೇಕು ಎಂದು ಶ್ರೀರಾಮುಲು ಮನವಿ ಮಾಡಿದರು. ಮಾಧ್ಯಮದವರೊಂದಿಗೆ ಮಾತನಾಡಿ,
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಮತ್ತೆ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ’ ಎಂದರು.
ಕ್ಷೇತ್ರದಲ್ಲಿ ತನ್ನ ವರ್ಚಸ್ಸು ಹೇಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಲು ಶ್ರೀರಾಮುಲು ಸಂವಾದ ಹಮ್ಮಿಕೊಂಡಿದ್ದಾರೆ. ವಿರಾಟ್ ಸಮಾವೇಶ, ಮೀಸಲಾತಿ ಹೆಚ್ಚಳ ಅಂಶ ಮುಂದಿಟ್ಟು ಮತ್ತೊಮ್ಮೆ ಇಲ್ಲಿಂದ ಸ್ಪರ್ಧೆ ಮಾಡಲು ಮುಂದಾದರೆ ಯಾವ ಅಭಿಪ್ರಾಯ ವ್ಯಕ್ತವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಲು ಕಾರ್ಯಕ್ರಮ ವೇದಿಕೆಯಾಯಿತು ಎಂದು ಕೆಲವರು ಅನಿಸಿಕೆ ವ್ಯಕ್ತಪಡಿಸಿದರು.
ನಾಯಕ ಸಮುದಾಯಕ್ಕೆ ಮೀಸಲಾತಿ ಹೆಚ್ಚಳದ ಬೇಡಿಕೆ 40 ವರ್ಷಗಳದ್ದಾಗಿತ್ತು. ಬೇಡಿಕೆ ಈಡೇರಿಕೆಗಾಗಿ ಹಲವರು ಶ್ರಮಿಸಿದ್ದಾರೆ. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿತು. ಇದರಿಂದ ಪರಿಶಿಷ್ಟ ಜಾತಿ, ಪಂಗಡಗಳಿಗೆ ರಾಜಕೀಯ, ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ವಿಫುಲ ಅವಕಾಶ ಸಿಗಲಿದೆ. ಇದರ ಫಲ ಮುಂದಿನ ಪೀಳಿಗೆ ನೆನೆಯಲಿದೆ’ ಎಂದರು.
ಸಾಧನೆ ಪೂರ್ಣಗೊಳಿಸಿದ್ದಕ್ಕೆ ಗೌರವ ಸಲ್ಲಿಸಲು ವಿರಾಟ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. 8 ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದ್ದು, ಮೊಳಕಾಲ್ಮುರು ಕ್ಷೇತ್ರದಿಂದ 25 ಸಾವಿರ ಜನ ತೆರಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಂಡಲಾಧ್ಯಕ್ಷ ಡಾ.ಪಿ.ಎಂ. ಮಂಜುನಾಥ್ ತಿಳಿಸಿದರು.