ತುಮಕೂರು: ನೀವು ಹೀಗೆ ಗಲಾಟೆ ಮಾಡಿದರೆ ಬಿ.ಸಿ.ನಾಗೇಶ್ ಅವರನ್ನು ಸೈಡಿಗೆ ಕಳುಹಿಸಿ ತಿಪಟೂರಿನಿಂದಲೇ ನಾನು ಚುನಾವಣೆಗೆ ನಿಲ್ಲಬೇಕಾಗುತ್ತದೆ’ ಎಂದು ಬಿ.ವೈ.ವಿಜಯೇಂದ್ರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ತಿಪಟೂರಿನಲ್ಲಿ ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವೇದಿಕೆಯಲ್ಲಿ ಮಾತನಾಡಲು ಮುಂದಾದಾಗ ಅವರ ಪರವಾಗಿ ನಿರಂತರವಾಗಿ ಜೈಕಾರ-ಚಪ್ಪಾಳೆಗಳು ಕೇಳಿ ಬಂದವು. ಅಭಿಮಾನಿಗಳ ಈ ಅಬ್ಬರಕ್ಕೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ನಾನು ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿದ್ದೇನೆ. ಏನೇ ಸವಾಲು ಬಂದರೂ ಮೆಟ್ಟಿನಿಲ್ಲೋ ಶಕ್ತಿಯನ್ನು ಯಡಿಯೂರಪ್ಪ ಹಾಗೂ ರಾಜ್ಯದ ಜನ ಕೊಟ್ಟಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅವರ ರಾಜಕೀಯ ಏಳು-ಬೀಳುಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಏನೇ ಸಮಸ್ಯೆ ಬಂದರೂ, ಸೋಲಾದರೂ ಸೋಲನ್ನೇ ಗೆಲುವಿನ ಮೆಟ್ಟಿಲು ಮಾಡಿಕೊಂಡು ನಾಡಿನ ಸೇವೆ ಮಾಡೋಕೆ ಸಿದ್ದನಿದ್ದೇನೆ. ಅದಕ್ಕೆ ನಿಮ್ಮ ಆಶೀರ್ವಾದ ಇರಬೇಕೆಂದರು.
ರಾಜ್ಯದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಕೊಟ್ಟಿರುವ ಪ್ರತಿಯೊಂದು ಕಾರ್ಯಕ್ರಮಗಳು ಪ್ರತಿಯೊಂದು ಮನೆಗೆ ತಲುಪಿದೆ. ಯಡಿಯೂರಪ್ಪ ಅವರಿಗೆ ಈಗ ಯಾವುದೇ ರಾಜಕೀಯ ಸ್ಥಾನಮಾನ ಇಲ್ಲ. ಹಾಗಿದ್ದರೂ ಅವರಿಗೆ ಕೋಟ್ಯಂತರ ಜನರು ತಮ್ಮ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಕೊಟ್ಟಿದ್ದಾರೆ ಎಂದು ಹೇಳಿದರು.