ವಿಜಯಪುರ : ಸನಾತನ ಧರ್ಮದ ಬಗ್ಗೆ ಮಾತನಾಡುವವರು ನಾಶವಾಗುತ್ತಾರೆ ಎಂದು ಶಾಸಕ ಬಸನಗೌಡಪಾಟೀಲ ಯತ್ನಾಳ ಕಿಡಿಕಾರಿದರು.
ಜಿಲ್ಲಾ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಶಂಖನಾದ ಅಭಿಯಾನ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಸನಾತನ ಉಳಿದರೆ ಹಿಂದೂಗಳು, ದಲಿತರು, ಸಂವಿಧಾನ ಇರಲು ಸಾಧ್ಯ, ಮುಖ್ಯಮಂತ್ರಿಗಳು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಟ್ವೀಟ್ ನಲ್ಲಿ ಸನಾತನ ಧರ್ಮ ಬಂದರೆ ಮನುವಾದ, ಮನುಸ್ಮೃತಿ ಬಗ್ಗೆ ಮಾತನಾಡಿದ್ದಾರೆ ಎಂದು ಸನಾತನ ಧರ್ಮದ ವಿಚಾರವಾಗಿ ಟೀಕಿಸುವವರ ವಿರುದ್ಧ ಪ್ರತಿಕ್ರಿಯಿಸಿದರು.
ಇನ್ನೂ ರೈತರು 5 ಲಕ್ಷ ರೂಪಾಯಿ ಪರಿಹಾರಕ್ಕೆ ಆತ್ಮಹತ್ಯೆ ಮಾಡಿಕೊಳ್ತಾರೆ ಎಂಬ ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಸಚಿವರೊಬ್ಬರು ರೈತರ ಆತ್ಮಹತ್ಯೆಯ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ, ಅವರು ನಮ್ಮ ಜಿಲ್ಲೆಯವರೇ, ನಾನು ಅವರಿಗೆ 5 ಕೋಟಿ ಕೊಡುತ್ತೇನೆ ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ಸಚಿವ ಶಿವಾನಂದ ಪಾಟೀಲ ವಿರುದ್ಧ ಕಿಡಿಕಾರಿದ್ದಾರೆ.
ಸಚಿವರ ಹೇಳಿಕೆಯನ್ನು ಉಪಮುಖ್ಯಮಂತ್ರಿ ಸಮರ್ಥಿಸಿಕೊಂಡಿದ್ದಾರೆ, ಉಪ ಮುಖ್ಯಮಂತ್ರಿಗಳಿಗೂ ನಾನು ಹೇಳ್ತೀನಿ, ನೀವು ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದೀರಿ ನಿಮಗೆ 25 ಕೋಟಿ ಕೊಡುತ್ತೇನೆ ನೀವು ಆತ್ಮಹತ್ಯೆ ಮಾಡಿಕೊಳ್ಳಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೂ ಸವಾಲು ಹಾಕಿದ್ದಾರೆ.
ಇದನ್ನೂ ಓದಿ : ‘ಬಿಜೆಪಿ ಕಾರ್ಯಕರ್ತರ ಮೇಲೆ ನಿಂತಿರುವ ಪಕ್ಷ’
ಈ ಎಡಪಂಥಿ ಹಾಗೂ ಕಾಂಗ್ರೆಸ್ ನವರಿಗೆ ದೇಶ, ದೇಶದ ರೈತರು, ದೇಶದ ಸೈನಿಕರ ಬಗ್ಗೆ ಗೌರವವಿಲ್ಲ ಅದಕ್ಕಾಗಿ ಹಾಗೆ ಮಾತಾಡ್ತಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಕಾರ್ಯಕರ್ತರು ಅವರಿಗೆ ಸರಿಯಾಗಿ ಉತ್ತರ ಕೊಡಿ ಎಂದು ಹರಿಹಾಯ್ದರು.
ಬಿಜೆಪಿ ಇಲ್ಲಿಯವರೆಗೂ ಮನುವಾದ, ಮನುಸ್ಮೃತಿ ಬಗ್ಗೆ ಚರ್ಚೆ ಮಾಡಿಲ್ಲ, ಸಂವಿಧಾನ ಬದಲಾಯಿಸುತ್ತೇವೆ, ಮೀಸಲಾತಿ ತೆಗೆಯುತ್ತೇವೆ ಎಂದೂ ಎಲ್ಲಿಯೂ ಹೇಳಿಲ್ಲ, ಯಾರೋ ಒಬ್ರು ಹೇಳಿದ ಮಾತ್ರಕ್ಕೆ ಅದು ಬಿಜೆಪಿ ಆಗುವುದಿಲ್ಲ, ಸನಾತನದ ಬಗ್ಗೆ ಅಂಬೇಡ್ಕರ್ ಏನು ಹೇಳಿದ್ದರು, ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಯಾವ ರೀತಿ ನಡೆಸಿಕೊಂಡಿತ್ತು ಎಂಬುದರ ಬಗ್ಗೆ ನಮ್ಮ ಕಾರ್ಯಕರ್ತರು ಜನರ ಮುಂದೆ ಬೆಳಕಿಗೆ ತರಬೇಕು ಎಂದು ವಾಗ್ದಾಳಿ ನಡೆಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.