ಬೆಂಗಳೂರು : ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ಈಗಲೇ ಸಿದ್ಧತೆ ಆರಂಭಿಸಿದ್ದು, ಕಾರ್ಯ ತಂತ್ರಗಳನ್ನು ರೂಪಿಸುತ್ತಿವೆ. ಈ ನಡುವೆ ನಾಳೆ (ಆಗಸ್ಟ್ 28) ಮಹತ್ವದ ಘೋಷಣೆ ಮಾಡುವುದಾಗಿ ಜೆಡಿಎಸ್ ವರಿಷ್ಠ ದೇವೇಗೌಡರು ತಿಳಿಸಿದ್ದಾರೆ.
ಇಂದು (ಭಾನುವಾರ) ನಗರದ ಚಾಮರಾಜಪೇಟೆಯಲ್ಲಿ ನಡೆದ ಹುಟ್ಟೂರ ಸನ್ಮಾನ ಸ್ವೀಕರಿಸಿ ಮಾತನಾಡಿದ ದೇವೇಗೌಡರು, ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. 91ನೇ ವಯಸ್ಸಿನಲ್ಲಿ ಸಮಸ್ಯೆಗಳು ನನ್ನ ಮುಂದೆ ಬರುತ್ತಿವೆ. ಎಲ್ಲವನ್ನೂ ಗಮನಿಸುತ್ತಿದ್ದೇನೆ. ನಾಳೆ ಬೆಳಿಗ್ಗೆ 11 ಗಂಟೆಗೆ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಎಲ್ಲಾ ವಿಷಯಗಳ ಬಗ್ಗೆ ಮಾತನಾಡುತ್ತೇನೆ. ನಾಳೆ ಒಂದು ಘೋಷಣೆ ಮಾಡಲಿದ್ದೇನೆ ಎಂದರು.
ಇದನ್ನೂ ಓದಿ : ಮಾಜಿ ಪ್ರಧಾನಿ ದೇವೇಗೌಡ ದಂಪತಿಗೆ ‘ಹುಟ್ಟೂರ ಸನ್ಮಾನ’
ವಿಧಾನಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪಗಳ ಸುರಿಮಳೆಗೈದಿದ್ದರು. ಆ ಸಂದರ್ಭ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳಲಿದೆ ಎಂದು ಹೇಳಲಾಗ್ತಿತ್ತು. ಆ ವೇಳೆ ಸುದ್ದಿಗೋಷ್ಠಿ ಕರೆದಿದ್ದ ದೇವೇಗೌಡರು, ಊಹಾಪೋಹಗಳಿಗೆ ತೆರೆ ಎಳೆದಿದ್ದರು. ನಾವು ಯಾರ ಜೊತೆಯೂ ಮೈತ್ರಿ ಮಾಡಿಕೊಳ್ಳುತ್ತಿಲ್ಲ. ಪಕ್ಷ ಸಂಘಟಿಸುತ್ತೇವೆ, ಸ್ವತಂತ್ರವಾಗಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ದರು. ಈಗ ಮತ್ತೆ ದೇವೇಗೌಡರು ಹೊಸ ಘೋಷಣೆ ಮಾಡುವುದಾಗಿ ಹೇಳಿರುವುದು ಕುತೂಹಲ ಮೂಡಿಸಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.