ರಾಯಚೂರು: ನಮ್ಮ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವವರೆಗೆ ನಾನು ನಿದ್ರಿಸುವುದಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳೂ ನನ್ನ ಗುರಿ ಎಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ಸವಾಲು ಹಾಕಿದ್ದಾರೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಬಳಿಕ ಮೊದಲ ಬಾರಿಗೆ ರಾಯಚೂರಿನ ಸಿಂಧನೂರಿನಲ್ಲಿ ಬಹಿರಂಗ ಸಮಾವೇಶ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ತಲೆ ಬಾಗುವಂತೆ ಮಾಡುತ್ತೇನೆ ಎಂದರು. ಅದಕ್ಕಾಗಿ ಹಿಂದುಳಿದ 18 ರಿಂದ 20 ಜಿಲ್ಲೆಗಳಲ್ಲಿ ನಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸುತ್ತೇವೆ. ನನ್ನ ಮಗಳು ತನ್ನೆಲ್ಲಾ ಕೆಲಸಗಳನ್ನ ಬಿಟ್ಟು ರಾಜಕೀಯಕ್ಕೆ ಬಂದಿದ್ದಾಳೆ. ಪಕ್ಷವನ್ನ ಬಲ ಪಡಿಸಲು ತನ್ನೆಲ್ಲಾ ಕೆಲಸಗಳನ್ನ ಬಿಟ್ಟು ವಿದೇಶದಿಂದ ಬಂದಿದ್ದಾಳೆ. ನಮ್ಮ ಕುಟುಂಬದಿಂದ ಯರ‍್ಯಾರು ಚುನಾವಣೆಗೆ ಸ್ಪರ್ಧಿಸುತ್ತಾರೆ ಅನ್ನೋದನ್ನ ಶೀಘ್ರದಲ್ಲೇ ಬಹಿರಂಗ ಪಡಿಸುತ್ತೇನೆ ಎಂದು ಹೇಳಿದ್ದಾರೆ. 2018 ರಲ್ಲಿಯೇ ಹೊಸ ಪಕ್ಷ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಆದ್ರೆ ಅಂದು ಬಿಜೆಪಿ ಯಡಿಯೂರಪ್ಪರನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ನಾನು ಪಾರ್ಟಿ ಮಾಡಿದ್ದರೆ ಯಡಿಯೂರಪ್ಪನವರಿಗೆ ಅಡ್ಡ ಬಂದ ಎನ್ನುವ ಅಪವಾದ ಬರುತ್ತಿತ್ತು. ನಾನು ಆ ಅಪವಾದ ಹೊರಲು ನಾನು ಸಿದ್ಧನಿರಲಿಲ್ಲ ಎಂದು ಮನಬಿಚ್ಚಿ ಮಾತನಾಡಿದ್ದಾರೆ. ನನಗಿನ್ನೂ ಸಣ್ಣ ವಯಸ್ಸು 5 ವರ್ಷ ಕಾದು ನೋಡೋಣ ಎಂದು ಹೊಸಪಕ್ಷ ಮಾಡಿದ್ದೇನೆ. ನಾನು ಜನರನ್ನ ನಂಬಿ ರಾಜಕೀಯಕ್ಕೆ ಬಂದಿದ್ದೇನೆ. ಪ್ರಾದೇಶಿಕ ಪಕ್ಷಗಳಿಗೆ ನಮ್ಮ ಭಾಗದ ಜನರ ದುಃಖ ದುಮ್ಮಾನಗಳು ತಿಳಿದಿರುತ್ತವೆ. ಜನರ ಮನೆ ಬಾಗಿಲಿಗೆ ಹೋಗಿ ಕೆಲಸ ಮಾಡುವ ಗುರಿಯನ್ನು ನಮ್ಮ ಪಕ್ಷ ಹೊಂದಿದೆ. ಸಿಂಧನೂರು ಸೇರಿ ಹಲವಾರು ಕ್ಷೇತ್ರದ ಅಭ್ಯರ್ಥಿಗಳನ್ನ ಒಂದೆರಡು ವಾರದಲ್ಲಿ ಘೋಷಣೆ ಮಾಡ್ತೇನೆ ಎಂದು ತಿಳಿಸಿದ್ದಾರೆ.