ಕೊಪ್ಪಳ: ಗಾಲಿ ಜನಾರ್ದನ ರೆಡ್ಡಿಗಂಗಾವತಿಯಲ್ಲಿ ಫುಲ್ ಪ್ರಚಾರಕ್ಕಿಳಿದಿದ್ದಾರೆ. ದರ್ಗಾದಲ್ಲೇ 6 ಕೋಟಿ ರೂ. ವೆಚ್ಚದ ಒಪ್ಪಂದವೊಂದಕ್ಕೆ ಸಹಿ ಮಾಡಿದ್ದಾರೆ. ಗಂಗಾವತಿಯ ಖಲಿಲುಲ್ಲಾ ಖಾದ್ರಿ ದರ್ಗಾ ಅಭಿವೃದ್ಧಿಗೆ 6 ಕೋಟಿ ರೂ. ದೇಣಿಗೆ ನೀಡಲು ಒಪ್ಪಿಗೆ ನೀಡಿದ್ದು, ರೆಡ್ಡಿ ನಡೆಯಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಗಲಿಬಿಲಿಯಾಗಿದ್ದಾರೆ.
ರಾಜಕೀಯ ಕುರಿತ ಎಲ್ಲ ಪ್ರಶ್ನೆಗಳಿಗೂ ಡಿಸೆಂಬರ್ 25ರ ಕಡೆ ಕೈ ತೋರಿಸಿದ ಜನಾರ್ದನ ರೆಡ್ಡಿ, ನಾನು ಇಲ್ಲೇ ಇರುತ್ತೇನೆ ಎನ್ನುವ ಮೂಲಕ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತ ಎಂಬ ಸುಳಿವು ಬಿಟ್ಟುಕೊಟ್ಟಿದ್ದಾರೆ. ನಗರಸಭೆ ಸದಸ್ಯರುಗಳು ಸೇರಿ ಹಲವು ಚುನಾಯಿತ ಪ್ರತಿನಿಧಿಗಳಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ರೆಡ್ಡಿಯ ಈ ಎಲ್ಲ ನಡೆ, ಗಂಗಾವತಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸೂಚನೆ ನೀಡುತ್ತಿದೆ.
ನನ್ನ ರಾಜಕೀಯ ಜೀವನದ ಬಗ್ಗೆ ಡಿ.25 ರಂದು ಗೊತ್ತಾಗುತ್ತೆ. ಯಾರು ಏನು ಅಂದ್ರು ಅಂದೆ ಗೊತ್ತಾಗುತ್ತೆ. ಅಂದೇ ಎಲ್ಲವನ್ನ ಹೇಳುತ್ತೇನೆ. ಆವತ್ತೆ ನನ್ನ ಜೊತೆ ಯಾರು ಬರ್ತಾರೆ ಬರಲ್ವೋ ಎನ್ನುವುದು ಗೊತ್ತಾಗುತ್ತೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ರೆಡ್ಡಿ ಸಂಚಲನ ಮೂಡಿಸಿದ್ದಾರೆ.
ಡಿಸೆಂಬರ್ 25ರಂದು ಬೆಂಗಳೂರಿನ ಪಾರಿಜಾತ ಅಪಾರ್ಟ್ಮೆಂಟ್ನಲ್ಲಿ ರೆಡ್ಡಿ ಸುದ್ದಿಗೋಷ್ಠಿ ಕರೆದಿದ್ದು, ತಮ್ಮ ರಾಜಕೀಯ ನಿಲುವು ಬಗ್ಗೆ ಮಹತ್ವದ ಘೋಷಣೆ ಮಾಡಲಿದ್ದಾರೆ. ಮತ್ತೊಂದೆಡೆ ಹೊಸ ಪಕ್ಷ ಘೋಷಣೆ ಮಾಡ್ತಾರಾ ಎನ್ನುವ ಕುತೂಹಲ ಮೂಡಿಸಿದೆ. ಡಿಸೆಂಬರ್ 25ರಂದು ಸುದ್ದಿಗೋಷ್ಠಿಗೂ ಮುನ್ನ ರೆಡ್ಡಿ ವಿವಿಧ ಮಠಗಳಿಗೆ ಭೇಟಿ ನೀಡುತ್ತಿದ್ದಾರೆ.