ಶಿವಮೊಗ್ಗ : ಜಿಲ್ಲೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ. ಮುಂಬರುವ ಜಿಲ್ಲಾ ಪಂಚಾಯತ ಚುನಾವಣೆ ಸೇರಿದಂತೆ ಇತರೆ ಚುನಾವಣೆಗಳಲ್ಲಿ ಬದಲಾವಣೆ ತರುವ ದಿಶೆಯಲ್ಲಿ ಕೆಲಸ ಮಾಡುವೆ. ಸರ್ಕಾರ ಬಡವರ ಬಗ್ಗೆ ಕಾಳಜಿ ಇಟ್ಟುಕೊಂಡು ಯಾವ, ಯಾವ ಯೋಜನೆ ಜಾರಿಗೆ ತಂದಿದೆ ಅವುಗಳನ್ನೆಲ್ಲ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಕ್ರಮಕೈಗೊಳ್ಳುತ್ತೇನೆ ಎಂದು ಮಾಜಿ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ನಗರದ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರಿಂದಾಗಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ. ಶಾಂತಿ ಮತ್ತು ಸೌಹಾರ್ದತೆಯ ಪರ್ವ ಕಾಲ ಬರಬೇಕಿದೆ. ಹೀಗಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಸದೃಢವಾಗಿ ಬಲಿಷ್ಠಗೊಳಿಸಬೇಕಿದೆ ಅದಕ್ಕಾಗಿ ಶ್ರಮಿಸುವುದಾಗಿ ಆಯನೂರು ತಿಳಿಸಿದರು.
ಇದನ್ನೂ ಓದಿ : ರಮೇಶ್ ಜಾರಕಿಹೊಳಿ-ಸಿಪಿವೈ ದಿಢೀರ್ ಭೇಟಿ
ತೆನೆ ಇಳಿಸಿ ಕೈ ಹಿಡಿದಿದ್ದ ಆಯನೂರು..
ಮಂಗಳೂರು, ಉಡುಪಿ, ತುಮಕೂರು, ಕೊಡಗು, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಒಳಗೊಂಡ ನೈಋತ್ಯ ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
ಆದರೆ ವಿಧಾನ ಪರಿಷತ್ ಅವಧಿ ಇನ್ನೂ ಉಳಿದಿರುವಾಗಲೇ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪರಿಷತ್ ಸದಸ್ಯತ್ವ, ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಆಯನೂರು ಮಂಜುನಾಥ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರಿದ್ದರು.
ಜೆಡಿಎಸ್ ಪಕ್ಷ ಈ ಬಾರಿಯ ಚುನಾವಣೆಗೆ ಆಯನೂರು ಮಂಜುನಾಥರನ್ನು ಶಿವಮೊಗ್ಗ ನಗರದ ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು. ಚುನಾವಣೆಯಲ್ಲಿ ಅವರು 8,863 ಮತಗಳನ್ನು ಮಾತ್ರ ಪಡೆದು ಹೀನಾಯ ಸೋಲು ಕಂಡಿದ್ದರು. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ 96,490 ಮತಗಳನ್ನು ಪಡೆದು ಗೆಲುವು ಕಂಡರು.
ಕಾಂಗ್ರೆಸ್‌ನ ಹೆಚ್. ಸಿ. ಯೋಗೇಶ್ 68,816 ಮತಗಳನ್ನು ಪಡೆದು 2ನೇ ಸ್ಥಾನಗಳಿಸಿದ್ದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾಗಿದ್ದ ಕೆ. ಎಸ್. ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದರು.
ಆಗ ಆಯನೂರು ಮಂಜುನಾಥ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಆಯನೂರು ಮಂಜುನಾಥ ಬದಲು ಈಶ್ವರಪ್ಪ ಆಪ್ತರಾದ ಚನ್ನಬಸಪ್ಪ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಬಳಿಕ ಆಯನೂರು ಮಂಜುನಾಥ ಬಿಜೆಪಿಗೆ ರಾಜೀನಾಮೆ ನೀಡಿ ಜೆಡಿಎಸ್ ಸೇರಿದ್ದರು. ಕೆಲ ದಿನಗಳ ಹಿಂದಷ್ಟೇ ಜೆಡಿಎಸ್ ಬಿಟ್ಟು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.