ವಿಜಯಪುರ: ಅಥಣಿ ಶಾಸಕ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಬೇಕು ಎಂದು ಶಾಸಕ ರಮೇಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿ, ಬೆಳಗಾವಿಯಲ್ಲಿ 13 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ. ಈ ಬಾರಿ ಇನ್ನೂ 2 ಸ್ಥಾನ ಹೆಚ್ಚಿಗೆ ಗೆಲ್ಲಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ಕುಮಟಳ್ಳಿಗೆ ಟಿಕೆಟ್ ಇಲ್ಲದೇ ಹೋದರೆ ನಾನು ಕೂಡಾ ಗೋಕಾಕ್‌ನಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಮುಳುಗುವ ಹಡಗು. ಈಗ ಹೋಗಿ ಏನು ಮಾಡುವುದು? ಬಿಜೆಪಿ ತತ್ವ ಸಿದ್ಧಾಂತ ನಂಬಿ ಕಾಂಗ್ರೆಸ್ ಬಿಟ್ಟು ಬಂದಿದ್ದೇನೆ. ಇನ್ನು ಬಿಜೆಪಿ ದೊಡ್ಡ ಪ್ರವಾಹ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯನ್ನು ಕೊಂಡಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
‘ಈಗಿರುವ ನಾಲ್ಕರಿಂದ ಆರು ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ. ಉಳಿದಂತೆ ಬಹುತೇಕ ಶಾಸಕರಿಗೆ ಟಿಕೆಟ್ ದೊರೆಯಲಿದೆ’ ಎಂದು ಮೊನ್ನೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದರು. ‘ನಾವು ಮೊದಲು ಸ್ಪಷ್ಟ ಬಹುಮತ ಪಡೆಯಬೇಕಿದೆ. ಆ ನಂತರ ಪಕ್ಷದ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದನ್ನು ನಿರ್ಧರಿಸುತ್ತೇವೆ’ ಎಂದು ಯಡಿಯೂರಪ್ಪ ಹೇಳಿದರು. ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಹಲವಾರು ಟಿಕೆಟ್ ಆಕಾಂಕ್ಷಿಗಳು ಹರಸಾಹಸ ಪಡುತ್ತಿದ್ದಾರೆ.