Thursday, September 28, 2023
spot_img
- Advertisement -spot_img

‘ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಭಾಗಿಯಾಗುವುದಿಲ್ಲ’

ನವದೆಹಲಿ : ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ವತಿಯಿಂದ ಚಾಲನೆ ನೀಡಿದ ‘ಜನಾಶೀರ್ವಾದ’ ಯಾತ್ರೆಗೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾತ್ರೆಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ಈಗಲೂ ಆಹ್ವಾನ ನೀಡಿದರೆ ಅದನ್ನು ತಿರಸ್ಕರಿಸುವುದಾಗಿ ಬೇಸರ ಹೊರಹಾಕಿದ್ದಾರೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಳ್ಳುವಂತೆ ಮನವಿ ಮಾಡಿದರೆ ಮುಕ್ತ ಮನದಿಂದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುವೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ‘ಒಂದು ರಾಷ್ಟ್ರ, ಒಂದು ಚುನಾವಣೆ’ ಜಾರಿಯಾದರೆ ಬಿಜೆಪಿಯವರು ಜನರ ಕೈಗೆ ಸಿಗಲ್ಲ’

ಈ ಯಾತ್ರೆಯಲ್ಲಿ ಭಾಗಿಯಾಗುವಂತೆ ಇದುವರೆಗೂ ನನಗೆ ಯಾವುದೇ ಆಹ್ವಾನ ಬಂದಿಲ್ಲ. ಈಗ ಕರೆದರೆ ನಾನು ಎಲ್ಲೂ ಹೋಗುವುದಿಲ್ಲ ಎಂದು ಸ್ವಪಕ್ಷದ ನಾಯಕರ ವಿರುದ್ಧವೇ ಅವರು ಆಕ್ರೋಶಿತರಾಗಿದ್ದಾರೆ.

ನನ್ನ ಹಾಗೂ ಮುಖ್ಯಮಂತ್ರಿ ಚೌಹಾಣ್ ಅವರ ನಡುವೆ ‘ಅವಿನಾಭಾವ’ ಸಂಬಂಧವಿದೆ, ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಯಾವುದೇ ಸಮಯದಲ್ಲಾದರೂ ಪ್ರಚಾರಕ್ಕೆ ಕರೆದರೆ ನಾನು ಅವರ ನಿರ್ಧಾರವನ್ನು ಬೆಂಬಲಿಸಿ ಚುನಾವಣಾ ಪ್ರಚಾರ ಮಾಡುವೆ ಎಂದು ಹೇಳಿದ್ದಾರೆ.

ಪಕ್ಷಕ್ಕಾಗಿ ರಕ್ತ ಮತ್ತು ಬೆವರನ್ನು ಸುರಿಸಿರುವವರಲ್ಲಿ ನಾನು ಒಬ್ಬಳಾಗಿದ್ದೇನೆ, ನನ್ನಿಂದ ಪಕ್ಷಕ್ಕೆ ಹಾನಿಯಾಗುವ ಹಾಗೆ ಯಾವುದೇ ಘಟನೆಗಳು ನಡೆಯುವುದಿಲ್ಲ. ವ್ಯವಸ್ಥೆ ಬದಲಾವಣೆಯಾಗುವುದರ ಜೊತೆಗೆ ಬಲಗೊಳ್ಳಬೇಕಾದರೆ ಶಾಸಕರಾದವರು, ಸಂಸದರಾದವರು, ಮುಖ್ಯಮಂತ್ರಿಗಳಾದವರೆಲ್ಲ ಸೇರಿದಂತೆ ಸರ್ಕಾರದ ಎಲ್ಲ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು. ಅಲ್ಲದೆ ಈ ಎಲ್ಲರ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸಬೇಕು. ಐ‍ಷಾರಾಮಿ ಹೋಟೆಲುಗಳಲ್ಲಿ ಉಳಿದುಕೊಳ್ಳುವುದೂ ಸಹ ಹಣದ ಪೋಲಿಗೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಹೇಗಿರಲಿದೆ ಜನಾಶೀರ್ವಾದ ಯಾತ್ರೆ..?

ಸೆಪ್ಟೆಂಬರ್ 3ರಂದು ಚಿತ್ರಕೂಟದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಯಾತ್ರೆಗೆ ಚಾಲನೆ ನೀಡಿದ್ದರು.

ಇದನ್ನೂ ಓದಿ : ಕೊಹ್ಲಿ ಫ್ಯಾನ್ಸ್ ಗೆ ಮಧ್ಯದ ಬೆರಳು ತೋರಿಸಿದ್ದು ಯಾಕೆ?..ಗಂಭೀರ್ ಸ್ಪಷ್ಟನೆ

ರಾಜ್ಯದ 5 ಪ್ರಮುಖ ಸ್ಥಳಗಳಲ್ಲಿ ಸಂಚರಿಸಲಿರುವ ಯಾತ್ರೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಸಮಾವೇಶಗಳನ್ನು ಆಯೋಜಿಸಿ ಸರ್ಕಾರಗಳ ಸಾಧನೆಗಳನ್ನು ಜನರಿಗೆ ತಲುಪಿಸಲಿದೆ.

ಸೆಪ್ಟೆಂಬರ್ 25ರಂದು ಮಧ್ಯಪ್ರದೇಶದ ರಾಜಧಾನಿ ಭೂಪಾಲ್‌ನಲ್ಲಿ ‘ಕಾರ್ಯಕರ್ತರ ಮಹಾಕುಂಭ’ ಸಮಾವೇಶದ ಮೂಲಕ ಕೊನೆಗೊಳ್ಳಲಿದ್ದು, ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles