ದಾವಣಗೆರೆ : ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ, ನನ್ನನ್ನು ಅವರು ಕರೆದೂ ಇಲ್ಲ, ನಾನು ಅಲ್ಲಿಗೆ ಹೋಗುತ್ತೇನೆ ಎಂದು ಹೇಳಿಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸ್ಪಷ್ಟನೆ ನೀಡಿದ್ದಾರೆ.
ಹೊನ್ನಾಳಿಯಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಬರ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲೂಕನ್ನು ಬರಪಟ್ಟಿಗೆ ಸೇರಿಸುವಂತೆ ಸಿಎಂ ಹಾಗೂ ಡಿಸಿಎಂ ಅವರನ್ನು ಭೇಟಿ ಮಾಡಿದ್ದೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ತಿಳಿಸಿದರು.
ಇದನ್ನೂ ಓದಿ : ‘ಛೇ, ಮಿನಿಮಮ್ ಮರ್ಯಾದೆಯೂ ಇಲ್ಲದಾಯಿತೇ’ ಎಂದು ಬಿಜೆಪಿಗರ ಕಾಲೆಳೆದ ಕಾಂಗ್ರೆಸ್!
ಮಾಜಿ ಶಾಸಕನಾಗಿ ನನ್ನ ಕರ್ತವ್ಯವನ್ನು ಮಾಡಿದ್ದೇನೆ. ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಪ್ರಮೇಯವೇ ಉದ್ಭವಿಸುವುದಿಲ್ಲ. ಈಗಾಗಲೇ ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರಬಲ ಆಕ್ಷಾಂಕ್ಷಿ ಎಂದು ನಾನು ತಿಳಿಸಿದ್ದೇನೆ, ನನಗೆ ಲೋಕಸಭಾ ಟಿಕೆಟ್ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಕಾಂಗ್ರೆಸ್‌ನಲ್ಲೇ 135ಜನ ಶಾಸಕರಿದ್ದಾರೆ, ಅವರಿಗೆ ನಮ್ಮ ಶಾಸಕರ ಅವಶ್ಯಕತೆ ಇಲ್ಲ, ರಾಜಕಾರಣನೇ ಬೇರೆ ಸ್ನೇಹವೇ ಬೇರೆಯಾಗಿರುತ್ತದೆ. ಇದರಲ್ಲಿ ರಾಜಕಾರಣ ಬೆರೆಸುವುದು ಬೇಡ ಈಗಾಗಲೇ ಕಂದಾಯ ಸಚಿವರ ನೇತೃತ್ವದಲ್ಲಿ ಬರ ತಂಡವನ್ನು ರಚಿಸಲಾಗಿದೆ. ಈ ತಿಂಗಳ 30ರ ಒಳಗಾಗಿ ಬರ ಅಧ್ಯಯನದ ವರದಿ ಬಂದ ಬಳಿಕ ನೂರಕ್ಕೆ ನೂರರಷ್ಟು ನನ್ನ ಮನವಿಯನ್ನು ಪರಿಗಣಿಸಿ, ಬರ ಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ನಮ್ಮ ತಾಲೂಕುಗಳನ್ನು ಸೇರಿಸುವ ಭರವಸೆ ನೀಡಿದ್ದಾರೆ ಎಂದರು.
ನಾನೊಬ್ಬ ಮಾಜಿ ಶಾಸಕ ನನ್ನನ್ನು ಜನರು ಮೂರು ಬಾರಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಆ ಎಲ್ಲ ಜನರ ಋಣ ನನ್ನ ಮೇಲಿದೆ ಅದನ್ನು ಪೂರ್ಣಗೊಳಿಸುವುದು ನನ್ನ ಕರ್ತವ್ಯ. ಅಲ್ಲದೆ ಈ ಹಿಂದೆ ಅತಿವೃಷ್ಟಿ ಸಂಭವಿಸಿದ್ದಾಗಲೂ ಇಡೀ ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಭೇಟಿ ನೀಡಿ ಸಾಧ್ಯವಾದಷ್ಟು ರೈತರ ನೆರವಿಗೆ ಧಾವಿಸಿದ್ದೇನೆ ಎಂದು ತಿಳಿಸಿದರು.
ಅದರಂತೆಯೇ ಈ ಬಾರಿಯೂ ಜಿಲ್ಲೆಯ ಸಚಿವರಾಗಿರುವ ಎಸ್ ಎಸ್ ಮಲ್ಲಿಕಾರ್ಜುನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಅವಳಿ ತಾಲೂಕುಗಳನ್ನು ಬರ ಪೀಡಿತ ಪ್ರದೇಶವನ್ನಾಗಿ ಘೋಷಿಸುವಂತೆ ಮನವಿ ಮಾಡಿಕೊಂಡಿರುವುದಾಗಿ ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.