Wednesday, November 29, 2023
spot_img
- Advertisement -spot_img

‘ಚೈತ್ರಾ ಕುಂದಾಪುರ ತಪ್ಪು ಮಾಡಿದ್ರೆ ಕಾನೂನು‌ ಕ್ರಮ ಕೈಗೊಳ್ಳಲಿ’

ಶಿವಮೊಗ್ಗ : ಚೈತ್ರಾ ಕುಂದಾಪುರ ತಪ್ಪು ಮಾಡಿದ್ರೆ ಕಾನೂನು‌ ಕ್ರಮ ಕೈಗೊಳ್ಳಲಿ. ಅನಗತ್ಯವಾಗಿ‌ ಹಿಂದೂಪರ ಕಾರ್ಯಕರ್ತರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಬಂಧನಕ್ಕೆ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೂಪರ ಕಾರ್ಯಕರ್ತರಿಗೆ ಅನಗತ್ಯವಾಗಿ ತೊಂದರೆ ಕೊಡುವುದು ಸಮಂಜಸವಲ್ಲ. ಅವರು ತಪ್ಪು ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಬರ ತಾಲೂಕುಗಳ ಘೋಷಣೆ : ಇಂದು ಸಂಪುಟ ಉಪ ಸಮಿತಿ ಸಭೆ

ಸಚಿವ ಡಿ. ಸುಧಾಕರ್ ವಿರುದ್ದ ಎಫ್ ಐಆರ್‌ಗೆ ಪ್ರತಿಕ್ರಿಯಿಸಿದ ಆರಗ, ಸುಧಾಕರ್ ಅವರಿಗೆ ಒಂದು ಕಾನೂನು, ಬೇರೆಯವರಿಗೆ ಒಂದು ಕಾನೂನಂತೇನಿಲ್ಲ. ಆದರೆ ಈ ಬಗ್ಗೆ ಡಿಸಿಎಂ ಸಮರ್ಥನೆ ಮಾಡಿಕೊಂಡಿದ್ದಾರೆ. ದಲಿತರ ಮೇಲಿನ ದೌರ್ಜನ್ಯವನ್ನು ನಾನು ಕೂಡಾ ಮಾಧ್ಯಮದಲ್ಲಿ ಗಮನಿಸಿದ್ದೇನೆ. ದಲಿತರಿಗೆ ಅನ್ಯಾಯ ಆಗಬಾರದು. ಪ್ರಕರಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ವರ್ಷ ಮಲೆನಾಡಿನಲ್ಲಿ ಕಡಿಮೆ ಮಳೆಯಾಗಿದೆ, ಇಲ್ಲಿ ಇಷ್ಟು ಕಡಿಮೆ ಪ್ರಮಾಣದ ಮಳೆ ಆಗಿರಲಿಲ್ಲ. ಭತ್ತದ ನಾಟಿ ಅರ್ಧಂಬರ್ಧ ಆಗಿದೆ. ಗದ್ದೆಗಳು ಒಣಗಿ ಬಿರುಕು ಬಿಟ್ಟಿವೆ, ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕುಡಿಯುವ ‌ನೀರಿಗೆ ಸಮಸ್ಯೆ ಆಗಲಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಅಂತಾ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಹಿಂದೆ ಅತಿವೃಷ್ಟಿ ಆದಾಗ ನಮ್ಮ ಸರ್ಕಾರ ಪರಿಹಾರ ಕೊಟ್ಟಿತ್ತು. ಈಗ ಅನಾವೃಷ್ಟಿ ಆಗಿದೆ ಸರ್ಕಾರ ಪರಿಹಾರ ಕೊಡಬೇಕು. ಸರ್ಕಾರ ಈ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ. ಬರ ಪರಿಹಾರ ನೀಡಲು ರಾಜ್ಯ ಸರ್ಕಾರ ಅಗತ್ಯ ಬಿದ್ದಲ್ಲಿ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು. ತಕ್ಷಣ ಈ ಬಗ್ಗೆ ಗಮನಹರಿಸಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಅನಿಯಮಿತ ಲೋಡ್ ಶೆಡ್ಡಿಂಗ್ ನಡೆಯುತ್ತಿದೆ. ಪಂಪ್ ಸೆಟ್ ಇದ್ದರೂ ವಿದ್ಯುತ್ ಇಲ್ಲದೇ ಬೆಳೆ ಬೆಳೆಯಲಾಗುತ್ತಿಲ್ಲ. ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಷಯದಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಮನವರಿಕೆ ಮಾಡಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದ್ದಾರೆ.

ಕಾಂಗ್ರೆಸ್ ಒಳಕುದಿ ಹೊರ ಬರುತ್ತಿದೆ. ಹರಿಪ್ರಸಾದ್ ಮುನ್ನಲೆಗೆ ಬಂದಿದ್ದಾರೆ ಅಷ್ಟೇ. ಇನ್ನು ಬಹಳಷ್ಟು ಜನ ಮಾತನಾಡುವವರು ಇದ್ದಾರೆ ಎಂದು ಆರಗ ಟೀಕಿಸಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles