ಬೆಂಗಳೂರು : ನಾನು ಯಾವತ್ತೂ ವರುಣ ಕ್ಷೇತ್ರದ ಜನರನ್ನು ಮರೆಯುವುದಿಲ್ಲ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೈಕಮಾಂಡ್ ಹೇಳಿದರೆ ವರುಣ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹದಿನಾರು ಮೋಳೆ ಗ್ರಾಮದಲ್ಲಿ ಗುರುವಾರ ಉಪ್ಪಾರ ಸಮೂದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಮುಖ್ಯಮಂತ್ರಿ ಆಗುವುದು ಅಷ್ಟುಸುಲಭದ ಮಾತಲ್ಲ. ನಾನು ಸಿಎಂ ಆಗಿದ್ದಾಗ ರಾಜ್ಯದ ಜನಸಂಖ್ಯೆ ಆರೂವರೆ ಕೋಟಿ ಇತ್ತು. ಈಗ ಏಳು ಕೋಟಿಯಾಗಿದೆ. ನೀವು ಇಲ್ಲಿಂದಲೇ ಸ್ಪರ್ಧಿಸಿ ಎಂದು ಕರೆಯುತ್ತಿದ್ದೀರಿ. ನಾನು ಹಾಲಿ ಶಾಸಕನಾಗಿರುವ ಬಾದಾಮಿ ಜನರು ಮತ್ತೆ ನಿಲ್ಲುವಂತೆ ಒತ್ತಾಯಿಸುತ್ತಿದ್ದಾರೆ.
ಕೋಲಾರ ಕ್ಷೇತ್ರದಿಂದಲೂ ಆಹ್ವಾನ ಬಂದಿದೆ ಎಂದರು. ಮೊದಲ ಬಾರಿ ಇಲ್ಲಿಂದ ಗೆದ್ದಾಗ ಪ್ರತಿಪಕ್ಷ ನಾಯಕನಾದೆ. ಎರಡನೇ ಬಾರಿ ಗೆದ್ದಾಗ ಮುಖ್ಯಮಂತ್ರಿಯಾದೆ. ಡಿ. ದೇವರಾಜ ಅರಸು ಅವರ ನಂತರ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಿದ್ದು ನಾನೇ ಎಂದರು. ಒಂದು ರಾಜ್ಯದ ಚುನಾವಣಾ ಫಲಿತಾಂಶ ಗಾಳಿ ಇನ್ನೊಂದು ರಾಜ್ಯಕ್ಕೆ ಬೀಸಲ್ಲ. ಗುಜರಾತ್ ಚುನಾವಣೆ ಫಲಿತಾಂಶ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಗುಜರಾತ್‌ನಲ್ಲಿ ಆಪ್ ಪಕ್ಷ ಬಹಳ ಹಣ ಖರ್ಚು ಮಾಡಿತ್ತು. ಕಾಂಗ್ರೆಸ್ ಮತ ವಿಭಜನೆಗಾಗಿ ಬಿಜೆಪಿಯೇ ಆಪ್‌ಗೆ ಫಂಡ್ ಮಾಡಿತ್ತು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.